Thursday, October 26, 2006

ನನಗಿಷ್ಟ ಬೇಸಗೆಯ ನಿರುಮ್ಮಳ ರಾತ್ರಿಗಳು,

ನನಗಿಷ್ಟ ಬೇಸಗೆಯ ನಿರುಮ್ಮಳ ರಾತ್ರಿಗಳು,
ಮೌನದಲ್ಲಿ ತೋಯಿಸಿದ ಜಡಿಮಳೆ,
ಅಪರಿಚಿತ ಊರಿನಲ್ಲೊಂದು ನಡುರಾತ್ರಿ,
ಚಿಕ್ಕಂದಿನಲ್ಲಿ ಬಿಟ್ಟುಬಂದ ಊರಿನ ಮನೆಯಲ್ಲೊಂದು ವಾಸ,
ಕಡು ಹಸಿವೆಯಲ್ಲಿ ತಿಂದ ರೊಟ್ಟಿ, ಕುಡಿದ ನೀರು,
ನನ್ನ ನೀಲಿ ಕೋಟು ಅದರೊಳಗೊಮ್ಮೆ
ಅಡಗಿದ್ದ ಅವಳ ನರುಗಂಪು,

ನನಗಿಷ್ಟ ಮೌನದ ದೂರ ನಡಿಗೆ,
ನನ್ನ ಹಳೆಯ ಅಂಗಿ,
ಕಾಲಿಗೆ ಮುತ್ತಿಕ್ಕುವ ಮೀನುಗಳು,
ಕೆರೆಯ ಮೇಲೆ ಬೀಸುವ ಗಾಳಿ,
ತೇಲಾಡುವ ಮುಂಗುರುಳು,
ಮುಂಜಾವಿನವರೆ ಕೊಚ್ಚಿದ ಹರಟೆ, ಮತ್ತು
ನನಗಿಷ್ಟ ಆಗಾಗ ಕಾಡುವ ನೆನಪುಗಳು,

- ಪ್ರಸನ್ನ ರೇವಣ್ಣ

Thursday, October 12, 2006

ಕರಿಮೋಡ ಚುಮುಕಿಸಿದ ತಣ್ಣನೆ ಹನಿಗಳಿಂದ

ಕರಿಮೋಡ ಚುಮುಕಿಸಿದ ತಣ್ಣನೆ ಹನಿಗಳಿಂದ
ತೊಯ್ದು ತೊಪ್ಪೆಯಾಗಿದೆ ಚೋರೆ ಹಕ್ಕಿಯ ಪುಕ್ಕ
ಕೊರೆಯುವ ರಾತ್ರಿ, ತಂಗಾಳಿಯ ಇರಿತ
ಆಗಾಗ ಬಂದು ಮರೆಯಾಗುವ ಚಂದ್ರನ ಸಂಗ
ಪಕ್ಕದ ಮಾವಿನ ಮರ ಚೆಲ್ಲುತ್ತಿದೆ ಹೂವು
ದೂರದಲ್ಲೆಲ್ಲೋ ಹರಿಯುವ ನೀರಿನ ಸದ್ದು
ಹಾರಾಡುವ ಕಪ್ಪಟೆ ಹಕ್ಕಿಗಳ ನೆರಳು
ಬಳ್ಳಿ ತಬ್ಬಿದ ಒಂಟಿ ಮರದ ಮೇಲೆ ಹಾಡಿದೆ
ನಮ್ಮ ಚೋರೆಹಕ್ಕಿ, ಮೌನಗಾನವದು
ಹೃದಯಕ್ಕೆ ಮಾತ್ರ ಕೇಳಿಸುವುದು!

- ಪ್ರಸನ್ನ ರೇವಣ್ಣ