Tuesday, April 03, 2018

ದಾವಣಗೆರೆ ಎಂದರೆ

ದಾವಣಗೆರೆ ಎಂದರೆ

ಮಲೆನಾಡು ಬಯಲುಸೀಮೆ ಉತ್ತರ ದಕ್ಷಿಣ
ಕರ್ಣಾಟದ ಹಗ್ಗ ಜಗ್ಗಾಟಗಳ ಮಧ್ಯೆ
ಘನವಾಗಿ ನಿಂತ ಬಯಲು

ಮಿಲ್ಲುಗಳ, ಕಾರ್ಮಿಕರ
ಕಾಮ್ರೇಡುಗಳ ಕೆಂಪುಧ್ವಜಗಳನ್ನು
ಮಾಲೀಕರ ಕಾಲ್ತುಳಿತವನ್ನೂ
ಒಡಲಲ್ಲಿ ಹಾಕಿ ನಿಂತ ಸಾಕ್ಷಿಪ್ರಜ್ಞೆ

ತಾಯಿ ದುಗ್ಗವ್ವನ ಮುಂದೆ
ಚೆಂಡಾಡಿದ ಕುರಿ ಕೋಣಗಳ ತಲೆ,
ಸುರಿದ ಕೋಡಿ ರಕ್ತ ತೊರೆಗಳು
ನರನಾಡಿಯಂತೆ ಹರಿದ
ಬೀದಿಗಳ ಸಾಲು

ಮಳೆ ಹನಿಯದಿದ್ದಾಗ ಬಸವಳಿದ ಜನ
ಅದೇ ತಾಯಿ ದುಗ್ಗವ್ವನ ಮುಂದೆ ಸಂತೆ ನೆರೆದು
ದೈವಕ್ಕೇ ಪ್ರತಿಭಟಿಸಲು ಹಿಮ್ಮೆಟ್ಟದ
ಮುಗ್ಧ ಮಾನಸರ ತವರು 

ಹೊಯ್ಸಳ ನಾಯಕ, ಹೈದರಾದಿಯಾಗಿ
ಮರಾಠರು ಆಳಿದರೂ ಕನ್ನಡದ ಕೈ ಬಿಡದ
ಲಕ್ಷ್ಮಿಯಾಳುವ ಸರಸ್ವತಿ ಕಾಣುವ 
ವಿದ್ಯೆಯ ಚಿಮ್ಮಿಸುವ ಆಗ್ರಹದ ಅಗ್ರಹಾರ

ಹಳೆಪೇಟೆ, ಹೊಸ ಪೇಟೆಗಳೆನ್ನದೇ
ಎಲ್ಲರಿಗೂ ಮಂಡೀಪೇಟೆಯ
ರುಚಿ ತೋರಿಸಿದರೂ ದಾನಕ್ಕೆ
ಚೆಲ್ಲಿದ ರೊಕ್ಕದ ಲೆಕ್ಕ ಇಡದ ಮಂದಿ


ವಿರಕ್ತರಿಗೆ ವೈರಾಗ್ಯವನ್ನೂ
ವೀರರಿಗೆ ಕಿರೀಟ ಪಲ್ಲಕ್ಕಿಯನ್ನೂ
ಬಸವನ ಹಾದಿ ಹಿಡಿದವರಿಗೆ
ದಾಸೋಹವನ್ನಿತ್ತ ವಣಿಕರೂರು 

ಪಟ್ಟಣವಾಗಿ ಬೆಳೆದರೂ ಗ್ರಾಮ್ಯ
ಆಚರಣೆಗಳನ್ನು ಬಿಡದ, ಶಿವರಾತ್ರಿ ನವರಾತ್ರಿ,
ಪಂಚಮಿ, ಹಟ್ಟಿ, ಮಹೇಶ್ವರ, ಬಕ್ಕೇಶ್ವರ ಎಲ್ಲ
ಹಬ್ಬಗಳನ್ನೂ ಸಾಲಮಾಡಿಯಾದರೂ
ಸಂಭ್ರಮಿಸುವ ಜನ

ಬೆಳ್ಳುಳ್ಳಿ ಖಾರ ನರ್ಗಿಸ್ ಮಂಡಕ್ಕಿ
ಮಿರ್ಚಿ, ಉದ್ದಿನೊಡೆ, ಗುಳಾಡಿಕೆ ಉಂಡಿ,
ಓಪನ್ ಖಾಲಿ ಬೆಣ್ಣೆದೋಸೆ, ಉಸುಲು, ಸೂಸಲು
ಮೆಲ್ಲುತ್ತಲೇ ಎಲ್ಲ ಮರೆಯುವ ರಸಿಕರೂರು

ಬಾಯಿಂದ ಮಾತಿನ ತಾಂಬೂಲ ಉಗಿದರೂ
ಹೆಗಲ ಮೇಲೆ ಕೈಹಾಕಿ ಸ್ವಾಗತಿಸುವ
ವಿಶೇಷ ಬೈಗುಳಗಳಲ್ಲಿ ದೇಶಕ್ಕೇ ಮೊದಲು
ನಿಲ್ಲಬಹುದಾದ ಸೃಜನಶೀಲ ಜನಪದ

ಸರ್ಪದಹುಣ್ಣಿಗೆ ಗರುಡನ ಚಿತ್ರ
ಹೊಟ್ಟೆ ನೋವಿಗೆ ಅರಿಶಿನಕೊಂಬಿನ ಚುಟುಕು
ಭಟ್ಟಿ ಬಿದ್ದದ್ದಕ್ಕೆ ಕಾಲು ನೀವಿದ ನಾಟಿವೈದ್ಯರಳಿದು
ದೇಶಕ್ಕೇ ಅಲೋಪತಿ ಡಾಕ್ಟರುಗಳನ್ನು
ಸಪ್ಲೈ ಮಾಡುವ ವಿದ್ಯಾಕ್ಷೇತ್ರ

ನಾಟಕ ಕಂಪನಿಗಳು ಹುಲುಸಾಗಿ ಬೆಳೆದ
ಅಭಿಯಂತರರಿಗೂ ರಂಗದ ರುಚಿ ಹತ್ತಿಸಿದ
ಕುಸ್ತಿ ಚಿತ್ರ ಸಂಗೀತ ಸಾಹಿತ್ಯಕ್ಕೆ ಬೆನ್ನಾಗಿ ನಿಂತ
ಅರಿಯದಿದ್ದರೂ ಮೆಚ್ಚುವ ರಸಪ್ರಜ್ಞೆ 

ಗುಡ್ಡ ಬೆಟ್ಟ ಪುರಾತನ ದೇಗುಲ ಕೋಟೆ
ನದಿ ಅರಮನೆ ವಾಡೆ ಐತಿಹ್ಯ ರಾಜಮನೆತನ
ಸಾಂಸ್ಕೃತಿಕ ಇತಿಹಾಸ ಇತ್ಯಾದಿ ಏನಿಲ್ಲದಿದ್ದರೂ
ಬಯಲಿನ ನಡುವೆ ಓಯಸಿಸ್ ನಂತೆ ನಾಡಿಗೆ
ಅಕ್ಷರಶಃ ಕೇಂದ್ರವಾಗಿ ನಿಂತ ಮೊದಲಿಗರೂರು
ನನ್ನ ತಾಯ್ನೆಲ ಸುಂದರ ಸೂರ್ಯಾಸ್ತಗಳ
ಬೆಳಕಿನೂರು ದಾವಣಗೆರೆ!

-ಪ್ರಸನ್ನ ರೇವನ್