Friday, August 05, 2016

'ಜಾನಿಸ್'

ಅದುರುವ ಕೈ ಒತ್ತಿ ಅದುಮಿ ಮೆಲ್ಲಗೆ 'ಕ್ರೈ ಬೇಬಿ' ಎಂದಳು
ಅವಳ ದನಿ ಸ್ವಲ್ಪ ದಪ್ಪ, ಕರ್ಕಶ ಎನಿಸಿದರೂ
ಅದರೊಳಗೆ ಕದಡಿದ ಹಸಿ ಅನುಭವಗಳ
ಮಾಧುರ್ಯದ ಇಂದ್ರಚಾಪದಿಂದ
ಎಂಥಾ ನೋವಾದರೂ ಪುನೀತ!
ಬದುಕಿನ ದಟ್ಟನೀಲಿ ದಿಗಂತದಲ್ಲಿ ಮಿಣುಕುವ
ಅವಳ ಟೇಲ್ ಲೈಟನ್ನು ಕನಸಿನಂತೆ ಹಿಂಬಾಲಿಸಿ
ನಿರ್ಜನ ತೀರದಲ್ಲಿ ಬಿಡಾರಹೂಡಿ
ನಕ್ಷತ್ರ ಹೊದ್ದು ಮಲಗಿ ಕಂಡಿದ್ದು
ಸಾವಿರ ಭಾವಗಳ ಸುದೀಪ್ತ ಜ್ವಾಲೆ!
ಲಕ್ಷ ಜನರ ನಡುವೆ ಹಾಡಿದರೂ ಏಕಾಂಗಿಯಾಗಿ
ಹೆಮ್ಮೆಯಿಂದ ನರಳಿದಳು
ಯಶದ, ಪ್ರೀತಿಯ ತೆಕ್ಕೆಯಿಂದ ಮೆಲ್ಲಗೆ ಜಾರುತ್ತಲೇ,
ಕಳೆದುಕೊಳ್ಳುವುದಕೇನು ಉಳಿಯದಿರುವುದೇ
ನಿರ್ಮುಕ್ತಿಯಲ್ಲವೇ ಎಂದು ನಕ್ಕವಳು
ಕೈಯಲ್ಲಿ ಕೈಹಿಡಿದು ಅಂತರಂಗದ ಅನಲವನ್ನು
ದಾಟಿಸುತ್ತಲೇ, ಕಡುಪ್ರೀತಿಯ ಕೆನ್ನಾಲಿಗೆಗಿರುವ
ಕನ್ನೈದಿಲೆಯಂತ ಮಾರ್ದವತೆಯ ದರ್ಶನ ಮಾಡಿಸುತ್ತಾ
ಲೋಕದ ನಿಯಮಗಳನ್ನು ಮುರಿದು ಮುಕ್ಕಿದ,
ನಿಯತಿಯನ್ನರಿಯದೆ ಪ್ರೇಮಜ್ವಾಲೆಯಲ್ಲೇ ಭಸ್ಮವಾದ
ಚೇತನ ನನ್ನ 'ಜೊಪ್ಲಿನ್'!
-ಪ್ರಸನ್ನ ರೇವನ್

ಹದಿಹರೆಯದವರು


ಭೋರ್ಗರೆವ ತೀರದ ಕಡೆಯಿಂದ 
ಬೀಸುವ ಬೆಚ್ಚಗಿನ ಗಾಳಿಗೆ ಮೆಲ್ಲನೆ ಜಾರುವ
ಮೈಗೆಲ್ಲಾ ಅಂಟಿದ ಪುಡಿಪುಡಿ ಮರಳು
ಇಲ್ಲೇ ಹಿಂದೊಂದು ತಿಳಿಗೊಳದೊಡಲಿನಲಿ
ಆಗಸಕೆ ಮುತ್ತಿಟ್ಟು ಮುಳುಗುವ ಮೀನು
ನೀಲಾಕಾಶದ ದಿಗಂತದಲ್ಲಿ ದಟ್ಟ ಕೆಂಪು!
ಉದ್ದ ಕಿನಾರೆಯ ದೂರದಲ್ಲಿ ಅಲ್ಲೆಲೋ
ಹರಡಿ ಬಿದ್ದ ಜೀನ್ಸು ಟಿ-ಶರ್ಟುಗಳು
ಅಮಲುಗಣ್ಣಿಗೆ ಕಾಣುವ ಪ್ರೇಮ, ದಾಹ, ತವಕ
ಎದೆಯೊಳಗೆ ಮಳ್ಳಗೆ ಕಾಯುವ ಪುಳಕ...
ನಾಗಮಂಡಲ ನೆನಪಿಸುವ ತೆಕ್ಕೆ
ಬಿಸಿಯುಸಿರು, ನೀರವ ಏಕಾಂತ
ಯಾರಿಗೂ ಹೆದರದ, ಕಾಯದ
ಕಾದ ಯೌವ್ವನ!

ನನ್ನ ನಿಮ್ಮೊಳಗಿನ ಕಲಾವಿದನಿಗೆ!


ಚಿತ್ರಬರೆಯಲು ಸಾಲದು 
ಬ್ರಷ್ಷು, ಹಾಳೆ, ಬಣ್ಣ, ಇತ್ಯಾದಿ
ನಿನ್ನ ಬಳಿಯಿದೆಯೇ ತಣ್ಣನೆಯ ಮನಸ್ಸು,
ಪುಟ್ಟ ಮೂಲೆ, ವಿಶಾಲ ಹೃದಯ?
ಬೆರಳುಗಳೇ ಕುಂಚ, ಆಕಾಶವೇ ಕ್ಯಾನ್ವಾಸ್!
ನಿನ್ನ ಮನಸ್ಸೇ ಗುರು, ಅದು ಬೇಡುವ ಸಂಬಳ
ನಿನ್ನ ದೈನಂದಿನದ ತಪಸ್ಸು
ಉಜ್ವಲ ಕನಸು ಮತ್ತು ಸ್ವಲ್ಪ ಬಿಂಕ!
ಮೀನುಮರಿಯಂತೆ ಪುಸಕ್ಕನೆ ಜಾರಿಬಿಡಬಹುದು
ನಿನ್ನ ಚಿತ್ರಸುಂದರಿ, ಎಚ್ಚರ...
ಗೀಚಿ ಬಂಧಿಸಿಬಿಡು ಮುಕ್ತಗೆರೆಗಳಲ್ಲಿ!
ಚೆಲ್ಲಿಬಿಡು, ಚಿಮ್ಮಿಬಿಡು
ಮನಸ್ಸಿನ ಬಣ್ಣಗಳನ್ನು ಎಲ್ಲೆಡೆಗೆ...
ಸುತ್ತಲೂ ಕಾಣುವುದೆಲ್ಲ ದೈವ ಕಲಾವಿದನಿಗೆ,
ನಿನ್ನ ದೃಷ್ಟಿ ಸೃಜಿಸುವುದೆಲ್ಲ ಕಲೆ
ಪರಿಧಿ, ವಿನ್ಯಾಸ, ಲಾಲಿತ್ಯ, ದರ್ಶನ,
ಕಾರಣ, ರೂಪಕದ ಗೋಜು ನೋಡುವವರಿಗೆ!
-ಪ್ರಸನ್ನ ರೇವನ್