Tuesday, May 12, 2020

ಅಮ್ಮ


ಅಮ್ಮ...

ಸಂಭವಿಸಿದೆ ಕಡುಹಳದಿಯ 
ಆಗಸದಲಿ ರವಿಯುದಿಸಿದದಂತೆ
ಆ ಕೊನೆಮುಟ್ಟದ ಆಗಸ 
ನೀನಲ್ಲವೇನು? 

ತಿರುತಿರುಗಿ ನಿಂತೆ ನೀಲಿಕಡಲ
ದೂರ ತೀರವ ತಲುಪಿದ ಚಿಪ್ಪಿನಂತೆ
ಪಾರಾವಾರವ ಬಳಸಿದ ದಡ 
ನೀನಲ್ಲವೇನು? 

ಜಯಿಸಿ ಬಂದೆ ಕರಿ ಮತಂಗದೆತ್ತರದ
ಪುಸ್ತಕವನುಂಡ ಸಾರಸ್ವತನಂತೆ 
ಎಡವಿದೊಡೆ ಮಸ್ತಕದಿ ಹೊಳೆವ ಪದ 
ನೀನಲ್ಲವೇನು? 

ಅಪ್ಪನೆನೆಸಿಕೊಂಡೆ ಕೆಂಗೆನ್ನೆಯ
ಮುಗುದೆಯರ ಸವಿಮಾತಿನಂತೆ 
ಆ ಎಳೆಪಾದಗಳು ನನ್ನೆದೆಯಲಿ ಮೂಡಿಸಿದ ಅಚ್ಚು 
ನೀನಲ್ಲವೇನು? 

ಯಾರೂ ಹೇಳಿಕೊಡದ ಮೊದಲ ಪದ
ಕೊನೆಯುಸಿರವರೆಗೂ ಮರೆಯದ ಪದ್ಯ 
ನೀನಲ್ಲವೇನು? 

- ಪ್ರಸನ್ನ 

Tuesday, February 04, 2020

ಎದುರಿಗೆ ಕಂಡವಳ ಕವಿತೆ

ಎದುರಿಗೆ ಕಂಡವಳ ಕವಿತೆ

ಪೇಲವ ಮೋಡಗಳ ಅಂಚಿಂದ ಜಾರಿದ
ಬೆಚ್ಚನೆ ನೆಲದ ಮಡಿಲನ್ನು ಕನಸಿದ
ಆ ಹಿಮದ ಹನಿ ಕೊನೆಗೂ ಮುತ್ತಿಟ್ಟಿತು
ಅವಳ ಕಂಗಳ ತುದಿಯ ಕಾಡಿಗೆ ತಟ್ಟನೆ ತೊಟ್ಟಿಕ್ಕಿತು

ರೆಪ್ಪೆಗಳ ನಿಧಾನದ ಅಪ್ಪುಗೆಯಲ್ಲಿ
ಹಿಂಡುವುದು ಯಾತನೆ ಕಣ್ಣಲ್ಲಿ
ಇಳಿಯುತ್ತಿದ್ದ ಸೂರ್ಯ ದಿಗಂತದೊಳಗೆ
ಜಾರುತ್ತಿತ್ತು ಕೆಂಡದ ಕಡ್ಡಿ ಬೆರಳೆಡೆಗೆ

ಕಾರಣವಿಲ್ಲದೆ ಏರುವ ಎದೆಬಡಿತ
ಕಾಣದ ಹಾದಿಗಳ ಹುಡುಕುವ ತುಡಿತ
ಪ್ರೇಮ ಮರೆತ ಮುಖದಲ್ಲಿ
ಭಾವನೆಗಳ ಹೊಯ್ದಾಟ? 


ಮೂಡದ ಚಿತ್ರವ ಅಡಗಿಸಿಕೊಂಡು
ಗಹಗಹಿಸಿ ಕೆರಳಿಸುವ ಹಾಳೆ,
ಕಾಲದ ಕಣ್ಣ ತಪ್ಪಿಸಿದ ಪ್ರೀತಿಯ ಆಳ,
ತೀರದ ಬಯಕೆಗಳ ಚಾದರದ ಕಪ್ಪಿನಲಿ
ಕನಸಿನ ಬಣ್ಣಗಳ ಬೆಳಕಿನಾಟ
ಇದು ಎದುರಿಗೆ ಕಂಡವಳ ಕವಿತೆ
ಅವಳು ಮತ್ತೆ ಕಾಣದಿರಲಿ

ಪ್ರಸನ್ನ