Saturday, November 19, 2011

ಬರೆಯಲಾಗದ ಕವಿತೆಗಳು

ಬರೆಯಲಾಗದ ಕವಿತೆ
ಕದ್ದು ನೋಡಿದ ಕನಸು
ಬಿದ್ದರೂ ಬದಲಾಗದ ರೂಪ
ಎದ್ದೆದ್ದು ಓಡುತ್ತಿರುವ ಬದುಕು

ಯಂತ್ರಗಳ ಸ್ನಿಗ್ಧತೆಯಲ್ಲಿ
ದೂರ ದೂರ ಸೂರ್ಯನ ಬೆಳಕು
ಕನ್ನಡಿಯೊಳಗಿನ ಮಾಯೆಯ ಥಳಕು
ಭದ್ರವಾಗಿದ್ದೂ ಬಳುಕುವ ಬದುಕು

ನಿರಂತರ ಬೀಸುವ ಬೆಳಕಿನ ಗಾಳಿ
ಸುಯ್ಯನೆ ಹುಯ್ದು ಬೆಚ್ಚಗಾಗಿಸುವ ಮಳೆ
ಅಚ್ಚ ಹಸುರಿನ ಕನಸುಗಳ ಮಧ್ಯೆ
ಹಣ್ಣು ಹಣ್ಣು ಮನಸು!

-ಪ್ರಸನ್ನ ರೇವಣ್ಣ

Monday, July 11, 2011

ಗೇಯ ಗೀತೆ

ಅಣು, ವಿಸ್ತಾರಗಳನ್ನೆಲ್ಲ ಕಳಚಿ ಸಿಡಿದು
ಭೂಮಿ, ಭೂಮಗಳನ್ನೆಲ್ಲ ಮಿಕ್ಕಿ ಮೊರೆದು 
ಅಂತರಾಳದಲ್ಲಿ ಕುಗ್ಗಿ ಬಸವಳಿದ ಭಾವನೆಗಳನ್ನೆಲ್ಲ ನಭಕ್ಕೆಸೆದು
ಚಿಮ್ಮಿ, ನುಗ್ಗಿ, ಹರಿದು, ಹರಿಯುತ್ತೇನೆ
ಸ್ವಾತಂತ್ರದ ಬೆಳುಮುಗಿಲಿನೆಡೆಗೆ,
ಸ್ವಚ್ಚಂದ ಪರಿಸರದಲ್ಲಿ ಕರಗಿ,
ಬೆಳಕಿನಲಿ ಬೆಳಕಾಗಿ, ಕತ್ತಲೆಯಲ್ಲಿ ಕತ್ತಲಾಗಿ
ನನ್ನೊಳಗೊಂದಾಗಿ ಬದುಕುತ್ತೇನೆ, ಬದುಕಿಸುತ್ತೇನೆ!

-ಪ್ರಸನ್ನ ರೇವನ್

Tuesday, May 03, 2011

ಮರಳಿನಲ್ಲಿ ಬಿದ್ದ ಮಳೆಹನಿಗಳು

ಕಳೆದು ಹೋಗುತ್ತವೆ ನಮ್ಮ ಕನಸು, 
ಕನವರಿಕೆ, ನೆನಪು ಮತ್ತು
ಅಂತರ್ಮುಖಿ ಸಂವಾದಗಳು
ಪ್ರತಿಮೆ, ಉಪಮೆ, ರೂಪಕಗಳಲ್ಲಿ

ಮರಳಿನಲ್ಲಿ ಬಿದ್ದ ಮಳೆಹನಿಗಳಂತೆ
ಸ್ವಪ್ನದಲಿ ಕೊಟ್ಟ ಮುತ್ತಿನಂತೆ
ಹೃದಯದ ದಟ್ಟ ತಿಮಿರದಲ್ಲಿ 
ಆಗಾಗ ಮೂಡುವ ರಾಗಗಳಂತೆ!

-ಪ್ರಸನ್ನ

Tuesday, August 10, 2010

ಮಳೆಗಾಲದ ಕಾವು

ಕನಸಿನ ಅಮಿತೋದ್ಯಾನದಲ್ಲಿ
ತೊಟ್ಟಿಕ್ಕುವ ಮಳೆಹನಿಗಳು
ಕಿಟಕಿಯೊಳಗಿನಿಂದ ನುಸುಳುವ
ಸೂರ್ಯರಶ್ಮಿಯನ್ನಪ್ಪಿದಾಗ
ಅಂತರಂಗದ ಕಾಮನ ಬಿಲ್ಲು
ಆಕಾಶಕೆಲ್ಲ ಚಾಚಿದೆ!

-ಪ್ರಸನ್ನ

Friday, January 29, 2010

ಆ ಒಂದು ತೊದಲು ನುಡಿ!

ಹೊಂಗೆ ಮೊಗ್ಗಿನ ಹಳ್ಳಿ ದಾರಿಯಲ್ಲೊಂದು ಹಳ್ಳ
ಹಳ್ಳದ ಬದುವಿನಲ್ಲೊಂದು ಘಮ ಘಮಿಸುವ ಮಲ್ಲಿಗೆ ತೋಟ
ಮಲ್ಲಿಗೆ ತೋಟದ ಬೇಲಿಯಲ್ಲೊಂದು ಹೂಬಿಟ್ಟ ಬೇವಿನಮರ
ಬೇವಿನಮರದ ಬಿಳಿಹೂವಿನ ಮೇಲೊಂದು ಕೆಂಪು ಚಿಟ್ಟೆ
ಕೆಂಪು ಚಿಟ್ಟೆಯ ಹಾದಿಯುದ್ದಕ್ಕೂ ಮಂಜಿನ ಹನಿ
ಮಂಜಿನ ಹನಿಗಳ ದಾಟಿಬಂದ ಸೂರ್ಯನಿಗೆ ಸಪ್ತವರ್ಣ!
ಸಪ್ತವರ್ಣಗಳನ್ನೂ ನಾಚಿಸಬಲ್ಲವು ಮಗುವಿನ ತುಟಿಗಳು
ಮಗುವಿನ ತುಟಿಗಳನ್ನು ಹಿಗ್ಗಿಸಬಲ್ಲದು ಮಗುವಿನ ನಗು!
ಮಗುವಿನ ನಗುವನ್ನು ಮೀರಿಸಿ ಬಿಟ್ಟಿದೆ ಒಂದು ತೊದಲ್ನುಡಿ!
ಪ್ರೀತಿಸುವ ಜೀವಗಳಿಗೆಲ್ಲ ಭಾವಗೀತೆ...
ಆ ಒಂದು ತೊದಲು ನುಡಿ!

Thursday, January 28, 2010

ಕಣ್ಣಮುಂದೆ ನೂರು ಮೈಲಿಗಳ ಕಪ್ಪು ಮೋಡ...

ಕಾಲಿನ ಕೆಳಗೆ ತಣ್ಣಗೆ ಹರಿಯುತ್ತಿದ್ದಾಳೆ ನೀಲಗಂಗೆ
ಕಣ್ಣಮುಂದೆ ನೂರು ಮೈಲಿಗಳ ಕಪ್ಪು ಮೋಡ
ಕೋರೈಸುತ್ತಿವೆ ಆಗಾಗ ಕಾಣುವ ಬೆಳ್ಳಕ್ಕಿ ಚುಕ್ಕಿ
ಕೊಳದ ಮಧ್ಯೆ ಗುಂಪಾಗಿ ಅಪ್ಪಿಕೊಂಡಿವೆ ಹಸಿರು ಕಮಲಗಳು
ಪವನನ ಸುಯ್ದಾಟ, ಹರಿದಾಟ, ತುಂಟಾಟಗಳಿಗೆ ನಾಚಿ!
ಅಲ್ಲೆಲ್ಲೋ ಭೂಮಿಯಪ್ಪಿ ತಬ್ಬಿವೆ ವರುಣನ ವರ್ಷಭಾಹು!
ಬೀಸುತ್ತಿದೆ ಸಂವತ್ಸರದ ಅತ್ಯಂತ ತಣ್ಣನೆಯ ಗಾಳಿ!

ನನ್ನ ಮನಸ್ಸೂ ತಬ್ಬಿದೆ ಬೆಚ್ಚನೆಯನೆನಪುಗಳನು
ಕಟ್ಟುತ್ತಿದೆ ಕಲ್ಪನೆಯ ಅಂಗಳದಲ್ಲೊಂದು ನಾಟ್ಯಶಾಲೆಯನ್ನು!
ಚಿತ್ರಿಸುತ್ತಿದೆ ಹೇಗೇಗೋ ಇರಬಹುದಾದ ಭವಿಷ್ಯದ ನೆನಪುಗಳನ್ನು!

Tuesday, September 29, 2009

ನನ್ನ ಹದಿಹರೆಯದ ಹಾಡುಗಳು!

ಮೊನ್ನೆ ಎನನ್ನೋ ಹುಡುಕುತ್ತಿದ್ದಾಗ ಧೂಳು ಬಿದ್ದ ಹಳೆಯ ಡೈರಿಯೊಂದರಿಂದ ಕೆಲವು ನನ್ನ ಹದಿಹರೆಯದ ಕವಿತೆಗಳು ಸಿಕ್ಕವು. ದಾವಣಗೆರೆಯ ನನ್ನ ಕಲಾಶಾಲೆಯ ದಿನಗಳಲ್ಲಿ ಯಾವುದೋ ಭಾವುಕತೆಯಿಂದ ಎಲ್ಲೆಲ್ಲೋ ಬರೆದು, ಗೀಚಿದ ಈ ಹಾಡುಗಳನ್ನು ಒಂದು ಡೈರಿಯಲ್ಲಿ ಒಟ್ಟಾಗಿ ಕೂಡಿಸಿದ್ದೆ. ಆಮೇಲೆ ಎನಾಯಿತೋ ಗೊತ್ತಿಲ್ಲ, ಕನಸುಗಳ ಹಿಂದೆ ಬೆನ್ನತ್ತಿ ಕಾಲಿಗೆ ನಾಯಿಗೆರೆ ಬಿದ್ದವನಂತೆ ಪ್ರಪಂಚವೆಲ್ಲಾ ಅಲೆದ ಮೇಲೆ... ಕಳೆದು ಹೋಗಿದ್ದ ಮುಗ್ಧ ನೆನಪುಗಳ ಮುಖಾಮುಖಿ...

ಎನೇ ಇರಲಿ... ಮತ್ತೆ ಕಳೆದಾವೆಂದು ಇಲ್ಲಿ ದಾಖಲಿಸುತ್ತಿದ್ದೇನೆ.


ಡೈರಿ ಪುಟ - ೧೯ನೇ ಅಕ್ಟೋಬರ್ - ಮಂಗಳವಾರ ೧೯೯೩.

ನೆನೆದ ನೆನಪುಗಳು
ಮನದ ವಿಶಾಲ ಅಲೆಗಳಲ್ಲಿ ಕುಣಿದು
ಕುಪ್ಪಳಿಸುತ್ತವೆಯೇಕೆ ನೆನಪುಗಳು?

ಕಲಕುತ್ತಾ ಬದುಕಿನ ಬಣ್ಣಗಳ...

ಕಾಲವನ್ನೂ ಭಾವವನ್ನೂ
ವಿಚಾರಗಳಲ್ಲಿ ತಾಳೆ ಹಿಡಿಯುತ್ತಾ...

ಮೂಡಲಾಗದ ಕೆಂಪುಸೂರ್ಯನನ್ನೂ...
ಸುಪ್ತಗೊಂಡ ಬ್ರಹ್ಮಾಂಡವನ್ನೂ...

ಕಲಕಲಾರದ ನೀರಿನೊಳಗೆ
ಅಡಗಿರುವ ಪ್ರತಿಮೆಗಳನ್ನೂ...

ಎಂದೂ ಉಕ್ಕಲಾರದ ಸಮುದ್ರದೊಳಗೆ...
ಅಲ್ಲೇ ಮೇಲೆ ಹಾರುವ ಹಿಂಸ್ರ ಪಕ್ಷಿಯೊಳಗೆ...

ಸದಾ ಅಪೂರ್ಣವಾಗುವ ನನ್ನ ಚಿತ್ರಗಳಿಗೆ...

- ಪ್ರಸನ್ನ ರೇವಣ್ಣ

-----------------------

ನಿನ್ನ ನೆನಪಿನ ತೋಟದಲ್ಲಿ
ಕನಸುಗಳ ಬಿತ್ತಿ
ಸ್ವಗತವಾಗಿ ನಿನ್ನನ್ನು
ಹೊರತೆಗೆಯಲು ಹೊರಟ ನಾನು
ಬರೀ ಕವಿತೆಯೆಂಬ ಕಳೆ ತೆಗೆದೆ!

-----------------------

ಡೈರಿ ಪುಟ - ೧೮ನೇ ಅಕ್ಟೋಬರ್ - ಸೋಮವಾರ ೧೯೯೩.

ನನ್ನ ಕನಸುಗಳು ಮಲಗಿಲ್ಲ
ಎಬ್ಬಿಸದಿರು ಎಳುವುದಿಲ್ಲ
ನಿನ್ನ ವಿರಹದ ಬೆಂಕಿಯಿಂದ
ಭಾವನೆಗಳ ಮೂಸೆಯಲ್ಲಿ ಬೆಂದು
ಅವು ಸತ್ತಿವೆ!

-----------------------

ಭಾಳ ಮಂದಿಗೆ ಅನ್ನಿಸೆತಿ ನಾ ಹುಚ್ಚ
ಆದ್ರ ನನಗನ್ನಿಸೆತಿ ನೀ ಹೂವಿನ ಗುಚ್ಚ!

-----------------------

ದಶಂಬರದ ಚಳಿ ಎಷ್ಟಿದೆಯೆಂದರೆ
ನಿನ್ನ ಸ್ವಪ್ನೋತ್ಕರ‍್ಷಿತ
ವರ್ಣಮಯ ರಾಗ ಜ್ವಾಲೆಗಳೂ
ಹಿಮದಂತೆ ನಿರ್ವರ್ಣವಾಗಿವೆ!

-----------------------

ಡೈರಿ ಪುಟ - ೧೫ನೇ ಅಕ್ಟೋಬರ್ - ಶುಕ್ರವಾರ ೧೯೯೩.

ನಿನ್ನ ನೋಟದ ವಿಶ್ಲೇಷಣೆಯಲ್ಲಿ
ಲೀನವಾದ ಭಾವಗಳನ್ನು ನಿನ್ನ
ಅಕ್ಷಯ ನಗೆರಾಗಗಳಿಂದ ಚುಚ್ಚಿ
ಭಾವತಾಮಸವನ್ನು ಸಮುಜ್ವಲಗೊಳಿಸು ಗೆಳತಿ!

-----------------------

ಮುಂಜಾವಿನ ನೀಹಾರಗಳೂ
ಪ್ರತಿಭಟಿಸುತ್ತಿವೆ
ನಿನ್ನ ಪ್ರಣಯೋತ್ಕರ‍್ಷಿತ
ಮನೋಗಮನವನ್ನು
ಸೂರ್ಯ ಸಮನಾದ ನಿನ್ನ
ಮೋಹಕ ಮೈತ್ರಿಯನ್ನು!

-----------------------

ವಸ್ತುವಾಗಿಹೆ ಗೆಳತಿ
ನನ್ನ ಅನನ್ಯ ಗಳಿಗೆಗಳಿಗೆ
ಮನಸ್ಸನ್ನು ರಸಗಳಿಗೆಗೆ
ಇಳಿಸುವ ಭಾವಗಳಿಗೆ

-----------------------

ಬಣ್ಣದ ನಕ್ಷತ್ರಗಳೂ
ಸ್ಪಂದಿಸಿ ನಿರ್ವರ್ಣವಾಗುತ್ತಿವೆ
ನನ್ನ ಭಾವಾತೀತ ಕನಸುಗಳಿಗೆ!

-----------------------

ಡೈರಿ ಪುಟ - ೧೬ನೇ ಅಕ್ಟೋಬರ್ - ಶನಿವಾರ ೧೯೯೩.

ಹದಿಮನಸಿನ ಅಪ್ಪಟಶಿಲೆಯಿಂದ
ಕೆಂಪು, ಹಳದಿ, ಹಸಿರು, ನೀಲಿ ಆಸೆಗಳನ್ನು
ನೀನು ಕೆತ್ತಿದಾಗ ಹಾರಿದ ತುಂಡುಗಳೇ
ಕನಸಾದವು!

-----------------------

ನಿನ್ನ ನೆನಪಿನಿಂದ ತೋಯ್ದ
ಮನದ ಅರಿವೆಯು ಬಣ್ಣದ
ಹನಿಗಳನ್ನು ತೊಟ್ಟಿಕ್ಕಿಸುತ್ತದೆ!
ಅವು ನನ್ನ ಕಾದ ಹೃದಯದ
ಮೇಲೆ ಬಿದ್ದು ಕವಿತೆಗಳಾಗಿ
ಆವಿಯಾಗುತ್ತಿವೆ!

-----------------------

ಡೈರಿ ಪುಟ - ೨೨ನೇ ಅಕ್ಟೋಬರ್ - ಶುಕ್ರವಾರ ೧೯೯೩.

ಒಡಲಿನ ಅಪೂರ್ಣ ಮಾತುಗಳಿಗೆ
ಸರಿಯಾದ ಪ್ರಾಸ ಹಾಕಿ
ಬಣ್ಣದ ಕನಸನ್ನು ಕಟ್ಟುವ
ಕವಿ ನೀನಾಗಿದ್ದರೆ!

ಭಾವಕ್ರಾಂತಿಯ ಸೂಕ್ಶ್ಮ
ಕನಸುಗಳ ಶುಭ್ರ ಕವಿತೆ
ನಾನಾಗುತ್ತಿದ್ದೆ!

-----------------------

ತಟಕ್ಕನೆ ಸುಸ್ತಾಗಿಸುವ
ನೆನಪುಗಳಿಗಿಂತಲೂ ಅಸಹಜ
ನಿನ್ನ ಮುಕ್ತ ಹೂ ನಗೆ

-----------------------

ಮನದ ಕಾರಂಜಿಯಲ್ಲಿ
ಬುಧ್ಬುದವಾಗಿ ಉಕ್ಕುವ
ಭಾವಗಳಿಗೆ ಅಂತ್ಯ
ನೀ ಹಾಡಿದರೂ
ಭಾವಾತೀತ ಅನುಭವಗಳಿಗೆ
ತಾಯಿಯಾದೆ!

-----------------------

ಉದ್ರೇಕಿತ ಕನಸುಗಳ
ನಡುವೆ ಭಿಕ್ಕುತಿದೆ ಮನಸ್ಸು
ಅಪೂರ್ಣ ಭಾವಗಳ
ಬೆಳಕಿಗೆ ಕತ್ತಲೆಯ
ಅಪೂರ್ವತೆಯ ನೀಡಲೆಂದು
ಸಂಗೀತಕೆ ಸಾಹಿತ್ಯಕೆ
ಕಲೆಯ ವರ್ಣಗಳ ಸಿಂಚನದ
ಮೆರುಗಿಗೆ ಕರಿಮಸಿ ಬಳಿಯಲೆಂದು!

-----------------------

ಸಲಿಲ ಶೀತಲ ಹುಣ್ಣಿಮೆಯ
ರಶ್ಮಿಗೂ ತವಕ ಗೆಳತಿ
ನಿನ್ನ ಲಲಾಟದಲ್ಲಿನ
ಬೆವರುಹನಿಗಳಿಗೆ ಮುತ್ತಿಕ್ಕಲು!
ಅಲ್ಲೇ ಪವನನೊಡನೆ
ಸರಸವಾಡುವ ಮುಂಗುರುಳುಗಳಿಗೆ
ಮತ್ತೇರಿಸಲು!!

- ಪ್ರಸನ್ನ ರೇವಣ್ಣ


Wednesday, April 22, 2009

ಸನ್ನಿಧಿ!

ಮನೆತುಂಬಿದೆ ಗುಲಾಬಿ ಹೂ ಹೆಜ್ಜೆಯ ಗೆಜ್ಜೆ
ಅಳುವಿನ ತುದಿಯಲ್ಲೊಂದು ತೊದಲು ದನಿ
ಪಿಸುಮಾತಿನಲ್ಲೊಂದು ಸ್ವಪ್ನ ರಾಗ
ನಗು ನಗುತ್ತಲೇ ಅಪ್ಪಿಕೊಳ್ಳುವ ಮುಗ್ಧ ತವಕ
ಒಲವು, ಒಡನಾಟ, ಅಸಂಗತ ಕನಸುಗಳೇ
ಮೂರ್ತರೂಪದಂತೆ ಸಾಕ್ಷಾತ್ಕರಿಸಿವೆ
ಮಗುವಾಗಿ
ಮಗಳಾಗಿ!
-ಪ್ರಸನ್ನ ರೇವಣ್ಣ

Wednesday, February 13, 2008

ಮೆತ್ತಗೆ ಹರಡಿರುವ ಮೋಡದ ಕಣ್ಣಂಚಿನಿಂದ

ಮೆತ್ತಗೆ ಹರಡಿರುವ ಮೋಡದ ಕಣ್ಣಂಚಿನಿಂದ
ತೆಳ್ಳಗೆ ಜಾರಿ ವೈಯ್ಯಾರದಿಂದ ನುಸುಳಿದ
ಮಳೆಹನಿಗಳು ಛಳಿಗಾಳಿಯಪ್ಪುಗೆಗೆ ಮಂಜಾದವು

ಕಿಟಕಿಯ ಹೊರಗಿನ ಕುಳಿಗಾಳಿಯಲ್ಲಿ
ನಿನ್ನ ಚಿತ್ರ ಹುಡುಕುತ್ತಿದ್ದ ನನ್ನ ಕಣ್ಣು ರೆಪ್ಪೆಗಳೂ
ಮಂಜಾದವು!

- ಪ್ರಸನ್ನ ರೇವಣ್

Tuesday, September 18, 2007

ಮರದ ಕೆಳಗೆ ಏಕಾಂಗಿಯಾಗಿ ನಿಂತಾಗ...

ನಿನ್ನೆ ಮುಂಜಾವಿನ ಜಡಿಮಳೆಯಲ್ಲಿ
ಮರದ ಕೆಳಗೆ ಏಕಾಂಗಿಯಾಗಿ ನಿಂತಾಗ
ಎದೆ ತುಂಬ ನೆನಪುಗಳ ಹೂಮಳೆ
ಗರಿಕೆಯಲಗಿನ ತುದಿಯ ಹನಿಗಳು,
ಚಿಕ್ಕ ತಗ್ಗುಗಳಲ್ಲಿ ಪುಟಿದೇಳುವ ಹನಿಗಳು,
ಮರದ ಕೊಂಬೆ, ಎಲೆಗಳಿಂದ ಜಾರಿ
ಕೆನ್ನೆ ಮೇಲೆ ಬೀಳುವ ಹನಿಗಳು,
ಎಲ್ಲ ನಿನ್ನ ನಗುವಾಗಿ ಮಿನುಗುತ್ತವೆ!

ಮೈಲುಗಳೆತ್ತರದಿಂದ ನನಗಾಗಿ ಬಿದ್ದ ಹನಿಗಳು,
ನೂರಾರು ಮೈಲಿ ದೂರದಿಂದ ನಿನ್ನನ್ನು
ಸವರಿಕೊಂಡು ನನ್ನ ಹೃದಯ ಸೇರಿದ ತಂಗಾಳಿ,
ನಾವು ಯಾವಾಗಲೂ ಕೈ ಜೋಡಿಸಿ
ನೆಡೆಯುತ್ತಿದ್ದ ಬಳುಕು ರಸ್ತೆಯ ಬೇಲಿಯ ಹೂಗಳು ,

ಮನಸಿನಲ್ಲಿ ಸುಳಿಯುವ ಅಚ್ಚ ಹರೆಯದ ನೆನಪುಗಳು,
ಕಪ್ಪು ಮೋಡಗಳ ಹಿಂದಿನ ಮೇಘಾಗ್ನಿಯಂತೆ,
ಕಾಣದಿದ್ದರೂ ಕೇಳಿಸುತ್ತವೆ!
ಅನಿರೀಕ್ಷಿತವಾಗಿ ಎದೆ ಝಲ್ಲೆನಿಸುತ್ತವೆ!!

-ಪ್ರಸನ್ನ ರೇವಣ್