Tuesday, August 22, 2006

ಆರೈಕೆಗಳಿಲ್ಲದಿದ್ದರೂ...

ಆರೈಕೆಗಳಿಲ್ಲದಿದ್ದರೂ ತುಳಿಸಿಕೊಂಡೂ
ಬಿರಬಿರನೆ ಬೆಳೆದು ನಿಂತು, ಕಂಪ ಸೂಸಿ
ಬೇಸಗೆಗೆ ಬಾಡಿ, ಮಳೆಗಾಲದಲ್ಲಿ ಬೊಮಿಯಪ್ಪಿ,
ಶತಮಾನಗಳಿಂದಲೂ ಮಹಾತ್ಮ, ಮೊರ್ಖರೆನ್ನದೆ
ಎಲ್ಲರ ಹಾದಿಗಳನ್ನಲಂಕರಿಸಿ, ಜಗವಾಳಿದ ಧಣಿಗಳ
ಕೋಟೆ ಕೊತ್ತಲಗಳನೇರಿ ಬೆಳೆದು, ತನ್ನ ಪಚ್ಚೆ
ಜೀವವನ್ನು ಸದ್ದಿಲ್ಲದೆ ಎಲ್ಲೆಡೆಗೆ ಹರಡಿ,
ಕೈಲಾಸದ ಶಿವನಿಂದ ಕೊಟ್ಟಿಗೆಯ ದನದವರೆಗೆ
ಎಲ್ಲರಿಗೂ ಆಪ್ಯಾಯಮಾನವಾದರೂ
ತಿರಸ್ಕೃತವಾದರೂ ತಾನು ತಾನಾಗಿಯೇ ನಿಂತ
ಪರಮ ಯೋಗಿಯೇ ಹುಲ್ಲು ಗರಿಕೆ!

- ಪ್ರಸನ್ನ ರೇವಣ್ಣ

Friday, August 18, 2006

ಹೆಮ್ಮರದ ಬಿರುಕುಗಳ ನಡುವೆ...

ಹೆಮ್ಮರದ ಬಿರುಕುಗಳ ನಡುವೆ ನುಸುಳುವ
ಇಬ್ಬನಿಯ ಹನಿಗಳು ಅಲ್ಲಿ ಜೀವ ಹುಟ್ಟಿಸುತ್ತವೆ,
ಆದರೂ ಚಿಗುರೆಲೆಗಳಿಂದ ನುಸುಳಿಬರುವ ಗಾಳಿ
ತಂದಿದೆ ಹೆಮ್ಮರಗಳನ್ನೂ ನಡುಗಿಸುವ ಛಳಿ!

ಪಚ್ಚೆ ಹತ್ತಿದ ಬಂಡೆಗಳ ನಡುವೆ ಸುತ್ತುವ
ಪವನನ ಎಕಾಂತ ನಾದ ನೃತ್ಯ! ಆ ಬಂಡೆಗಳನ್ನಪ್ಪಳಿಸುವ
ಸಮುದ್ರದಲೆಗಳ ಭಾವೋದ್ವೇಗ! ಸಂಜೆ ಸೂರ್ಯನ
ಕೆಂಪನ್ನು ಅಡಗಿಸಲು ಕರಿಮೋಡಗಳು ನುಗ್ಗಿದಂತೆ!

ಹಸುರು ಗದ್ದೆಗಳ ನಡುವೆ ಒಂಟಿಬಂಡಿ
ದೂರದಲ್ಲೊಂದು ಮರಕುಟಿಗನ ಸದ್ದು,
ಜಗತ್ತಿನ ವ್ಯಾಪಾರಗಳ ವ್ಯಾಪಕತ್ವದ ಮದ್ಯೆ,
ನನ್ನ ಎದೆ ತುಂಬ ಮನೆಯ ನೆನಪು!

- ಪ್ರಸನ್ನ ರೇವಣ್ಣ

Thursday, August 17, 2006

ತಿಳಿಯಾದ ಮುಗಿಲುಗನ್ನಡಿಯೊಂದು...

ತಿಳಿಯಾದ ಮುಗಿಲುಗನ್ನಡಿಯೊಂದು
ಮಲಗಿದೆ ನನ್ನೆದುರಿಗೆ!
ಪೂರ್ವದಲ್ಲಿನ ಪ್ರೇಮಿ, ಎದುರಿನ
ಚಂದ್ರಕಾಂತೆಯನ್ನು ನೋಡಲು ಹೊರಟಾಗ
ಮಧ್ಯೆ ಇಣುಕುತ್ತಾನೆ!

ನೋಡುವವರಿಗೆ ಬೇಕಾದದ್ದು ಕಾಣಿಸಬಹುದು
ಕಾಣಿಸುತ್ತದೆ, ನೋಡುವ ಮಿಂಚುಳ್ಳಿಗಳಿಗೆ
ಹೊಳೆಯುವ ಮೀನುಗಳ ರಾಶಿ!
ಆಗಾಗ ಕನ್ನಡಿಯನ್ನು ಚುಂಬಿಸುವ ಮೇಘಗಳಿಗೆ
ಕಾಣಿಸಬಹುದು ಎದೆಯೊಳಗಿನ ಮಿಂಚು!

ಮುಗಿಲುಗನ್ನಡಿಯೊಳಗಿನ ಕವಿತೆಯೆಂಬಂತೆ
ಕಮಲಗಳು ಅರಳುತ್ತವೆ ಅಲ್ಲಲ್ಲಿ, ಹದಿಹರೆಯಕೆ
ಬರುವ ಗುಲಾಬಿ ಮೊಡವೆಗಳಂತೆ
ದೂರದ ರವಿಯ ಸೆಳೆತಕ್ಕೆ ನಾಚಿ!

ದೂರವಿರುವ ಭರವಸೆಗಳು ನಿನ್ನನ್ನೂ
ಪುಳಕಿಸಲಿ! ಹೋಗಿ ನೋಡು ನಿನ್ನ
ಹತ್ತಿರದ ಮುಗಿಲುಗನ್ನಡಿಯಲ್ಲಿ
ಒಮ್ಮೆ ನಿನ್ನನ್ನು!!

- ಪ್ರಸನ್ನ ರೇವಣ್ಣ