Wednesday, December 13, 2006

ಮುಂದೆಂದೋ ಹುಟ್ಟುವ ಕವಿತೆಯೊಳಗೆ

ನನ್ನ ಮನದ ಹೊಳೆ ಹರಿಯುತ್ತಿದೆ
ಸಂಜೆಯ ಗುಲಾಬಿ ಆಕಾಶದೆಡೆಗೆ
ಚೈತ್ರನ ತುಂಡು ಮೇಘಗಳೆಡೆಗೆ
ನೂರಾರು ಎಕರೆಗಳ ಹಚ್ಚ ಹಸಿರಿನಲ್ಲಿ
ಚಿಕ್ಕ ತೊರೆಯಂತೆ ಹರಿಯುತ್ತಿದೆ
ನಮ್ಮ ಮನದ ಹೊಳೆ
ಮುಂದೆಂದೋ ಹುಟ್ಟುವ ಕವಿತೆಯೊಳಗೆ
ಅಡಗಿ ಕುಳಿತಿರುವ ಹುಡುಗಿಯಡೆಗೆ!

- ಪ್ರಸನ್ನ ರೇವಣ್ಣ

Sunday, December 10, 2006

ನನ್ನ ಹದಿಹರೆಯುತ್ತಿರುವಾಗ...

ನನ್ನ ಹದಿಹರೆಯುತ್ತಿರುವಾಗ ನನಗಿಷ್ಟವಾಗುತ್ತಿತ್ತು
ದಟ್ಟ ಕಾಡು, ಬೆಚ್ಚಗಿನ ಹುಲ್ಲು, ಕಾದ ನೆಲ...
ಸ್ವಚ್ಚಂದ, ಸ್ವತಂತ್ರ ಭಾವ!

ಯೌವ್ವನದ ಹೊಸ್ತಿಲಲಿ ಪದವಿಯ ಮರಳು
ಸಮಾಜದ ಯಂತ್ರಕ್ಕೆ ನನ್ನ ಕೊರಳು
ಅಂದೊದು ದಿನ ಎದ್ದು ಕುಳಿತಾಗ
ಬಂದು ನಿಂತಿತ್ತು ಇಪ್ಪತ್ತೆಂಟನೆಯ ಉಗಾದಿ!

ವ್ಯವಸ್ಥೆಯನ್ನು ಕಟ್ಟುತ್ತೇವೆ ನಾವು
ನಮ್ಮ ಕಾಲಿಗೆ ನಾವೇ ಕಟ್ಟಿಕೊಳ್ಳುವ ಕುಣಿಕೆಯಂತೆ
ಕನ್ನಡಿಯ ಗಂಟನ್ನು ಕಂಡು ಮರುಗುತ್ತೇವೆ
ಎಡವುತ್ತೇವೆ ಎದೆಯ ದನಿಯ ಹೊಸ್ತಿಲನ್ನು!

ಬೇಕು ಒಪ್ಪೊತ್ತಿನ ಊಟ, ಕಣ್ಣಿಗೆ ನಿದ್ರೆ
ಮನಸ್ಸಿಗೆ ಧ್ಯಾನ! ಆಗಾಗ ಬೀಳುವ ಕನಸು!
ಬೇಕು ಬುದ್ದಿಗೆ ಸವಾಲು, ವಿದ್ಯೆಗೆ ಗುರಿ
ದುಡಿಯುವ ಕೈಗಳಿಗೆ ನಿವೃತ್ತಿಯಿಲ್ಲದ ಕೆಲಸ!

ನನ್ನ ಹಳ್ಳಿ ಚಿಕ್ಕದು, ನನ್ನ ಪ್ರಪಂಚ ದೊಡ್ಡದು
ನನ್ನ ಮನೆಗಿವೆ ಕೆಲವೇ ಕೋಣೆ
ಮನೆಯ ಸುತ್ತಲಿವೆ ನನ್ನಜ್ಜನಂತ ಮರಗಳು
ನನ್ನಜ್ಜಿಯ ಮುಸುಕಿನಂತೆ ಬಂದು ನಿಲ್ಲುತ್ತದೆ
ಮುಂಜಾವಿನ ಮಂಜು

ಸಂಪಿಗೆ ಮರದ ಹಾದು ಬಂದಿದೆ
ತಂಗಾಳಿ, ಆಗಾಗ ಸುರಿಯುತ್ತದೆ
ಕಾಡು ಮಳೆ. ಬಿರಿದು ನಿಂತ
ಕಪ್ಪು ನೆಲದೊಳಗೊಂದು
ಚಿಗುರು ಮೊಡುತ್ತದೆ!
ಇನ್ನೂ ಕಾಣುವ ದೂರ ದಿಗಂತದಲ್ಲಿ
ಸೂರ್ಯ ಹುಟ್ಟುತ್ತಾನೆ!

- ಪ್ರಸನ್ನ ರೇವಣ್ಣ