Tuesday, September 29, 2009

ನನ್ನ ಹದಿಹರೆಯದ ಹಾಡುಗಳು!

ಮೊನ್ನೆ ಎನನ್ನೋ ಹುಡುಕುತ್ತಿದ್ದಾಗ ಧೂಳು ಬಿದ್ದ ಹಳೆಯ ಡೈರಿಯೊಂದರಿಂದ ಕೆಲವು ನನ್ನ ಹದಿಹರೆಯದ ಕವಿತೆಗಳು ಸಿಕ್ಕವು. ದಾವಣಗೆರೆಯ ನನ್ನ ಕಲಾಶಾಲೆಯ ದಿನಗಳಲ್ಲಿ ಯಾವುದೋ ಭಾವುಕತೆಯಿಂದ ಎಲ್ಲೆಲ್ಲೋ ಬರೆದು, ಗೀಚಿದ ಈ ಹಾಡುಗಳನ್ನು ಒಂದು ಡೈರಿಯಲ್ಲಿ ಒಟ್ಟಾಗಿ ಕೂಡಿಸಿದ್ದೆ. ಆಮೇಲೆ ಎನಾಯಿತೋ ಗೊತ್ತಿಲ್ಲ, ಕನಸುಗಳ ಹಿಂದೆ ಬೆನ್ನತ್ತಿ ಕಾಲಿಗೆ ನಾಯಿಗೆರೆ ಬಿದ್ದವನಂತೆ ಪ್ರಪಂಚವೆಲ್ಲಾ ಅಲೆದ ಮೇಲೆ... ಕಳೆದು ಹೋಗಿದ್ದ ಮುಗ್ಧ ನೆನಪುಗಳ ಮುಖಾಮುಖಿ...

ಎನೇ ಇರಲಿ... ಮತ್ತೆ ಕಳೆದಾವೆಂದು ಇಲ್ಲಿ ದಾಖಲಿಸುತ್ತಿದ್ದೇನೆ.


ಡೈರಿ ಪುಟ - ೧೯ನೇ ಅಕ್ಟೋಬರ್ - ಮಂಗಳವಾರ ೧೯೯೩.

ನೆನೆದ ನೆನಪುಗಳು
ಮನದ ವಿಶಾಲ ಅಲೆಗಳಲ್ಲಿ ಕುಣಿದು
ಕುಪ್ಪಳಿಸುತ್ತವೆಯೇಕೆ ನೆನಪುಗಳು?

ಕಲಕುತ್ತಾ ಬದುಕಿನ ಬಣ್ಣಗಳ...

ಕಾಲವನ್ನೂ ಭಾವವನ್ನೂ
ವಿಚಾರಗಳಲ್ಲಿ ತಾಳೆ ಹಿಡಿಯುತ್ತಾ...

ಮೂಡಲಾಗದ ಕೆಂಪುಸೂರ್ಯನನ್ನೂ...
ಸುಪ್ತಗೊಂಡ ಬ್ರಹ್ಮಾಂಡವನ್ನೂ...

ಕಲಕಲಾರದ ನೀರಿನೊಳಗೆ
ಅಡಗಿರುವ ಪ್ರತಿಮೆಗಳನ್ನೂ...

ಎಂದೂ ಉಕ್ಕಲಾರದ ಸಮುದ್ರದೊಳಗೆ...
ಅಲ್ಲೇ ಮೇಲೆ ಹಾರುವ ಹಿಂಸ್ರ ಪಕ್ಷಿಯೊಳಗೆ...

ಸದಾ ಅಪೂರ್ಣವಾಗುವ ನನ್ನ ಚಿತ್ರಗಳಿಗೆ...

- ಪ್ರಸನ್ನ ರೇವಣ್ಣ

-----------------------

ನಿನ್ನ ನೆನಪಿನ ತೋಟದಲ್ಲಿ
ಕನಸುಗಳ ಬಿತ್ತಿ
ಸ್ವಗತವಾಗಿ ನಿನ್ನನ್ನು
ಹೊರತೆಗೆಯಲು ಹೊರಟ ನಾನು
ಬರೀ ಕವಿತೆಯೆಂಬ ಕಳೆ ತೆಗೆದೆ!

-----------------------

ಡೈರಿ ಪುಟ - ೧೮ನೇ ಅಕ್ಟೋಬರ್ - ಸೋಮವಾರ ೧೯೯೩.

ನನ್ನ ಕನಸುಗಳು ಮಲಗಿಲ್ಲ
ಎಬ್ಬಿಸದಿರು ಎಳುವುದಿಲ್ಲ
ನಿನ್ನ ವಿರಹದ ಬೆಂಕಿಯಿಂದ
ಭಾವನೆಗಳ ಮೂಸೆಯಲ್ಲಿ ಬೆಂದು
ಅವು ಸತ್ತಿವೆ!

-----------------------

ಭಾಳ ಮಂದಿಗೆ ಅನ್ನಿಸೆತಿ ನಾ ಹುಚ್ಚ
ಆದ್ರ ನನಗನ್ನಿಸೆತಿ ನೀ ಹೂವಿನ ಗುಚ್ಚ!

-----------------------

ದಶಂಬರದ ಚಳಿ ಎಷ್ಟಿದೆಯೆಂದರೆ
ನಿನ್ನ ಸ್ವಪ್ನೋತ್ಕರ‍್ಷಿತ
ವರ್ಣಮಯ ರಾಗ ಜ್ವಾಲೆಗಳೂ
ಹಿಮದಂತೆ ನಿರ್ವರ್ಣವಾಗಿವೆ!

-----------------------

ಡೈರಿ ಪುಟ - ೧೫ನೇ ಅಕ್ಟೋಬರ್ - ಶುಕ್ರವಾರ ೧೯೯೩.

ನಿನ್ನ ನೋಟದ ವಿಶ್ಲೇಷಣೆಯಲ್ಲಿ
ಲೀನವಾದ ಭಾವಗಳನ್ನು ನಿನ್ನ
ಅಕ್ಷಯ ನಗೆರಾಗಗಳಿಂದ ಚುಚ್ಚಿ
ಭಾವತಾಮಸವನ್ನು ಸಮುಜ್ವಲಗೊಳಿಸು ಗೆಳತಿ!

-----------------------

ಮುಂಜಾವಿನ ನೀಹಾರಗಳೂ
ಪ್ರತಿಭಟಿಸುತ್ತಿವೆ
ನಿನ್ನ ಪ್ರಣಯೋತ್ಕರ‍್ಷಿತ
ಮನೋಗಮನವನ್ನು
ಸೂರ್ಯ ಸಮನಾದ ನಿನ್ನ
ಮೋಹಕ ಮೈತ್ರಿಯನ್ನು!

-----------------------

ವಸ್ತುವಾಗಿಹೆ ಗೆಳತಿ
ನನ್ನ ಅನನ್ಯ ಗಳಿಗೆಗಳಿಗೆ
ಮನಸ್ಸನ್ನು ರಸಗಳಿಗೆಗೆ
ಇಳಿಸುವ ಭಾವಗಳಿಗೆ

-----------------------

ಬಣ್ಣದ ನಕ್ಷತ್ರಗಳೂ
ಸ್ಪಂದಿಸಿ ನಿರ್ವರ್ಣವಾಗುತ್ತಿವೆ
ನನ್ನ ಭಾವಾತೀತ ಕನಸುಗಳಿಗೆ!

-----------------------

ಡೈರಿ ಪುಟ - ೧೬ನೇ ಅಕ್ಟೋಬರ್ - ಶನಿವಾರ ೧೯೯೩.

ಹದಿಮನಸಿನ ಅಪ್ಪಟಶಿಲೆಯಿಂದ
ಕೆಂಪು, ಹಳದಿ, ಹಸಿರು, ನೀಲಿ ಆಸೆಗಳನ್ನು
ನೀನು ಕೆತ್ತಿದಾಗ ಹಾರಿದ ತುಂಡುಗಳೇ
ಕನಸಾದವು!

-----------------------

ನಿನ್ನ ನೆನಪಿನಿಂದ ತೋಯ್ದ
ಮನದ ಅರಿವೆಯು ಬಣ್ಣದ
ಹನಿಗಳನ್ನು ತೊಟ್ಟಿಕ್ಕಿಸುತ್ತದೆ!
ಅವು ನನ್ನ ಕಾದ ಹೃದಯದ
ಮೇಲೆ ಬಿದ್ದು ಕವಿತೆಗಳಾಗಿ
ಆವಿಯಾಗುತ್ತಿವೆ!

-----------------------

ಡೈರಿ ಪುಟ - ೨೨ನೇ ಅಕ್ಟೋಬರ್ - ಶುಕ್ರವಾರ ೧೯೯೩.

ಒಡಲಿನ ಅಪೂರ್ಣ ಮಾತುಗಳಿಗೆ
ಸರಿಯಾದ ಪ್ರಾಸ ಹಾಕಿ
ಬಣ್ಣದ ಕನಸನ್ನು ಕಟ್ಟುವ
ಕವಿ ನೀನಾಗಿದ್ದರೆ!

ಭಾವಕ್ರಾಂತಿಯ ಸೂಕ್ಶ್ಮ
ಕನಸುಗಳ ಶುಭ್ರ ಕವಿತೆ
ನಾನಾಗುತ್ತಿದ್ದೆ!

-----------------------

ತಟಕ್ಕನೆ ಸುಸ್ತಾಗಿಸುವ
ನೆನಪುಗಳಿಗಿಂತಲೂ ಅಸಹಜ
ನಿನ್ನ ಮುಕ್ತ ಹೂ ನಗೆ

-----------------------

ಮನದ ಕಾರಂಜಿಯಲ್ಲಿ
ಬುಧ್ಬುದವಾಗಿ ಉಕ್ಕುವ
ಭಾವಗಳಿಗೆ ಅಂತ್ಯ
ನೀ ಹಾಡಿದರೂ
ಭಾವಾತೀತ ಅನುಭವಗಳಿಗೆ
ತಾಯಿಯಾದೆ!

-----------------------

ಉದ್ರೇಕಿತ ಕನಸುಗಳ
ನಡುವೆ ಭಿಕ್ಕುತಿದೆ ಮನಸ್ಸು
ಅಪೂರ್ಣ ಭಾವಗಳ
ಬೆಳಕಿಗೆ ಕತ್ತಲೆಯ
ಅಪೂರ್ವತೆಯ ನೀಡಲೆಂದು
ಸಂಗೀತಕೆ ಸಾಹಿತ್ಯಕೆ
ಕಲೆಯ ವರ್ಣಗಳ ಸಿಂಚನದ
ಮೆರುಗಿಗೆ ಕರಿಮಸಿ ಬಳಿಯಲೆಂದು!

-----------------------

ಸಲಿಲ ಶೀತಲ ಹುಣ್ಣಿಮೆಯ
ರಶ್ಮಿಗೂ ತವಕ ಗೆಳತಿ
ನಿನ್ನ ಲಲಾಟದಲ್ಲಿನ
ಬೆವರುಹನಿಗಳಿಗೆ ಮುತ್ತಿಕ್ಕಲು!
ಅಲ್ಲೇ ಪವನನೊಡನೆ
ಸರಸವಾಡುವ ಮುಂಗುರುಳುಗಳಿಗೆ
ಮತ್ತೇರಿಸಲು!!

- ಪ್ರಸನ್ನ ರೇವಣ್ಣ