Tuesday, September 18, 2007

ಮರದ ಕೆಳಗೆ ಏಕಾಂಗಿಯಾಗಿ ನಿಂತಾಗ...

ನಿನ್ನೆ ಮುಂಜಾವಿನ ಜಡಿಮಳೆಯಲ್ಲಿ
ಮರದ ಕೆಳಗೆ ಏಕಾಂಗಿಯಾಗಿ ನಿಂತಾಗ
ಎದೆ ತುಂಬ ನೆನಪುಗಳ ಹೂಮಳೆ
ಗರಿಕೆಯಲಗಿನ ತುದಿಯ ಹನಿಗಳು,
ಚಿಕ್ಕ ತಗ್ಗುಗಳಲ್ಲಿ ಪುಟಿದೇಳುವ ಹನಿಗಳು,
ಮರದ ಕೊಂಬೆ, ಎಲೆಗಳಿಂದ ಜಾರಿ
ಕೆನ್ನೆ ಮೇಲೆ ಬೀಳುವ ಹನಿಗಳು,
ಎಲ್ಲ ನಿನ್ನ ನಗುವಾಗಿ ಮಿನುಗುತ್ತವೆ!

ಮೈಲುಗಳೆತ್ತರದಿಂದ ನನಗಾಗಿ ಬಿದ್ದ ಹನಿಗಳು,
ನೂರಾರು ಮೈಲಿ ದೂರದಿಂದ ನಿನ್ನನ್ನು
ಸವರಿಕೊಂಡು ನನ್ನ ಹೃದಯ ಸೇರಿದ ತಂಗಾಳಿ,
ನಾವು ಯಾವಾಗಲೂ ಕೈ ಜೋಡಿಸಿ
ನೆಡೆಯುತ್ತಿದ್ದ ಬಳುಕು ರಸ್ತೆಯ ಬೇಲಿಯ ಹೂಗಳು ,

ಮನಸಿನಲ್ಲಿ ಸುಳಿಯುವ ಅಚ್ಚ ಹರೆಯದ ನೆನಪುಗಳು,
ಕಪ್ಪು ಮೋಡಗಳ ಹಿಂದಿನ ಮೇಘಾಗ್ನಿಯಂತೆ,
ಕಾಣದಿದ್ದರೂ ಕೇಳಿಸುತ್ತವೆ!
ಅನಿರೀಕ್ಷಿತವಾಗಿ ಎದೆ ಝಲ್ಲೆನಿಸುತ್ತವೆ!!

-ಪ್ರಸನ್ನ ರೇವಣ್

Monday, August 27, 2007

ಝುಳು ಝುಳೆನ್ನುವ ಸರದ ಸಾಲಿನ...

ಝುಳು ಝುಳೆನ್ನುವ ತೊರೆಯ ಸಾಲಿನ
ಕೇದಿಗೆ ಕಂಟಿಗಳ ನಡುವೆ
ಹರೆಯದ ಹೆಣ್ಣಿನಂತೆ ಹೋಯ್ದಾಡುತ್ತ
ಬರುತ್ತಿರುವ ಮಂದಾನಿಲದ ಕಂಪಿನ್ನೆಲ್ಲಿ?

ಸಾವಿರ ಕರಿಯಾನೆಗಳ ರಾಶಿಯಂಥ
ಥಣ್ಣನೆಯ ಬೆಟ್ಟಗಳ ಬೆನ್ನೇರಿ ಬಂದ
ಮೋಡಗಳಿಗೆ ಸಡ್ಡು ಹೊಡೆದು
ಇಬ್ಬನಿಯ ತಬ್ಬಿದ್ದ ಗರಿಕೆಯಲ್ಲಿ?

ಹಾದಿಯ ಬದಿಯಲ್ಲಿ ರತ್ನಜಾಲಿಯ
ಸಿಂಹಾಸನದಲ್ಲಿ ಕುಳಿತು ಸಪ್ತ ರಾಗಗಳ
ಸಾವಿರ ವರ್ಣಗಳನ್ನು ಊರ್ಧ್ವ ಮುಖಿಯಾಗಿ
ಹಾಡುತ್ತಿದ್ದ ಗುಬ್ಬಳದ ಹಕ್ಕಿಗಳೆಲ್ಲಿ?

ಊದುತ್ತಿದ್ದ ವಾಯುದೇವನನ್ನು
ತನ್ನ ವಿಶಾಲ ಬಾಹುಗಳಿಂದ ನಿಲ್ಲಿಸಿ
ಮೈಯೆಲ್ಲ ಕೊಳಲಾಗಿ ಮರ್ಮರ
ನಾದದಲೆಗಳಿಂದ ತೂಗುತ್ತಿದ್ದ
ಹೆಮ್ಮರ ಸಂಕುಲವೆಲ್ಲಿ?

ಎಲ್ಲಿ ಹುಡುಕಲಿ ಅಚ್ಚರಿಯ ಮೋಡಗಳ
ಮಧ್ಯೆ ನಿಚ್ಚಳದ ಬೆಳಕ?
ಎಲ್ಲಿ ಹುಡುಕಲಿ ನಿರಾಳ ಮೌನದಿ
ಬಂದ ನಿಶ್ಚಯದ ದ್ವನಿಯ?
ಎಲ್ಲಿ ಬೀಸಿದೆ ನಿಸರ್ಗದ ಬೀಸಣಿಕೆ
ನಿರ್ಮಲವಾಗಿ?

- ಪ್ರಸನ್ನ ರೇವಣ್ಣ

Tuesday, February 20, 2007

ಋತುಗಳೂ ಬಣ್ಣ ಬದಲಿಸುತ್ತವೆ ಏಕೆ?

ಏಕೆ ಹಾಡಿದೆ ಕೋಗಿಲೆ ಮಾಮರಕೆ
ಏಕೆ ಹಾಡಿದವೆ ಮೇಘಗಳು ಅಂಬರಕೆ
ಪ್ರಿಯೇ, ಮಿಲನ ಸಮಯದಲ್ಲಿ
ಋತುಗಳೂ ಬಣ್ಣ ಬದಲಿಸುತ್ತವೆಯೇಕೆ?

ಸ್ನಿಗ್ಧ ಯಾಮಿನಿಯ ತಟದಲ್ಲಿ
ಬಣ್ಣ ಚೆಲ್ಲುತ್ತಾನೆ ದಿನಕರ
ನಿನ್ನನ್ನು ಕಂಡೊಡನೆ
ನನ್ನ ಕಣ ಕಣಗಳೂ
ಪುಲಕಗೊಳ್ಳುತ್ತವೆ ಏಕೆ?

ಮನ ಮಥಿಸುವಾಗ
ಮೊಳಗುವ ಮನದ ದನಿಗೆ
ಕುಣಿದಾಡಿದೆ ಎದೆಯ ತಾಳ!
ಕಾಲ್ಗೆಜ್ಜೆಯೂ ಸರಿಗಮ ಹಾಡಿದೆ
ಸಂಗೀತವಾದ ನಿನ್ನೊಲುಮೆ
ಸಾಂಗತ್ಯಕ್ಕೆ....

- ಪ್ರಸನ್ನ ರೇವಣ್ಣ

Wednesday, February 14, 2007

ಕಿಟಕಿಯ ಹೊರಗೆ ಭೋರ್ಗರೆಯುತಿದೆ ಮಳೆ

ಕಿಟಕಿಯ ಹೊರಗೆ ಭೋರ್ಗರೆಯುತಿದೆ ಮಳೆ
ರೇಶಿಮೆಯಂಥ ಚಿಗುರುಗಳು ಮೂಡಿವೆ ಅಲ್ಲಲ್ಲಿ
ಅನಂತವಾಗಿ ಚಾಚಿದ ಬಯಲು ಮುಗಿಯುತ್ತದೆ
ತೆಳುನೇರಳೆಯ ಪರ್ವತರಂಗಗಳಲಿ...
ಕಪ್ಪು ಗೂಡಿನ ದೀಪವನು ಕುಣಿಸುತ್ತಿದೆ
ಮೇಘಗಳಂಚಿನಿಂದ ಜಾರಿ ಬಿದ್ದ ತಂಗಾಳಿ

ದೂರ ಸರಿಯುತ್ತಿದ್ದಾನೆ ಗ್ರೀಷ್ಮ
ಹರಿಯುವ ನೀರಿನಲ್ಲಿ ಬಿದ್ದ ಹೂವಿನಂತೆ..
ನನ್ನ ನೆನಪುಗಳನ್ನು ಎಳೆದೊಯ್ಯುತ್ತಿದ್ದಾನೆ
ನನ್ನ ಕಲ್ಪನೆಯ ಸ್ವರ್ಗದೊಡನೆ....

- ಪ್ರಸನ್ನ ರೇವಣ್ಣ