Friday, November 17, 2006

ನನ್ನ ಮುಂದೆ ದರ್ಶನಗಳಿವೆ, ಮುಖಗಳಿಲ್ಲ...

ಮನೆ ಹೊರಗೆ ಸುರಿಯುತ್ತಿದೆ ಸೋನೆ ಮಳೆ,
ಹಿತ್ತಲಿನ ಬಾಳೆಯೆಲೆಗಳ ಡಮರುನಾದ
ಸಂಜೆಗತ್ತಲಿನಲ್ಲಿ ಕುಣಿದಾಡಿದ ದೀಪ
ಬರೆದಿದೆ ಬೆಳ್ಳಿ ಗೆರೆಗಳ ಹಾಡು
ನುಗ್ಗಿದ ಗಾಳಿಯೊಂದಿಗೆ ಕತ್ತಲಿನ ಹಾಳೆಯಲ್ಲಿ.

ನನ್ನ ಮುಂದೆ ದರ್ಶನಗಳಿವೆ, ಮುಖಗಳಿಲ್ಲ
ನನ್ನ ಹಿಂದೆ ದಾರ್ಶನಿಕ ಋಷಿಗಳಿಲ್ಲ
ಅನಂತವಾಗಿದೆ ಸುತ್ತಲಿನ ಪ್ರಕೃತಿ!
ಏಕಾಂಗಿ ಹೃದಯ ಬಿಕ್ಕುತ್ತಿದೆ
ಬೀಳುತ್ತಿರುವ ಕಣ್ಣೀರುಗಳೆಲ್ಲವೂ ಅಕ್ಷರಗಳು
ಬೆಟ್ಟದ ಮೇಲೆಲ್ಲೋ ಬೆಳೆದ ಕಾಡು ಹೂಗಳು!

- ಪ್ರಸನ್ನ ರೇವಣ್ಣ

Tuesday, November 14, 2006

ಹನಿಮಳೆಯಲ್ಲಿ ತೊಯ್ದ ಮಾವಿನ ಚಿಗುರು...

ಹನಿಮಳೆಯಲ್ಲಿ ತೊಯ್ದ ಮಾವಿನ ಚಿಗುರು
ಹೊಚ್ಚ ಹೊಸ ಟಾರು ರಸ್ತೆಯ ವೈಯ್ಯಾರ
ಕಡು ಬಿಸಿಲಿನಲಿ ಸಿಕ್ಕ ಬಣ್ಣದ ಬೀಸಣಿಕೆ
ಮೊದಲಬಾರಿ ಸೀರೆಯುಟ್ಟು ನಿಂತ ಚಿಕ್ಕ ತಂಗಿ
ಗಾಳಿಯಲ್ಲಿ ತೇಲಿ ಭುಜದ ಮೇಲೆ ಬಿದ್ದ ಹಣ್ಣೆಲೆ
ಅಂದೆಂದೋ ನಸುನಗೆ ಬೀರಿದ ಯಾರದೋ ಮಗು
ಸಂಜೆ ಐದಕ್ಕೆ ನುಸುಳುವ ಸ್ವರ್ಣ ರಶ್ಮಿ
ಚುಮುಚುಮೆನ್ನುವ ಬೆಳಗಿನ ನೀಲಿ ಬಣ್ಣ
ಮನಸ್ಸಿನೊಳಗೆ ಮೇಘ ಮಂದಾರವನ್ನೆಬ್ಬಿಸುತ್ತವೆ
ಮುದುಡಿದ ಕನಸುಗಳಿಗೆ ಇಂಧನವಾಗಿ
ಚೈತನ್ಯವನ್ನು ಬಡಿದೆಬ್ಬಿಸುತ್ತವೆ,
ಸರಳತೆಯೇ ಜೀವನವೆನ್ನಿಸುತ್ತವೆ!

- ಪ್ರಸನ್ನ ರೇವಣ್ಣ