Monday, July 31, 2006

ಹಂಪಿಯ ಮತಂಗವನ್ನೇರಿ ನಿಂತಾಗ...

ಹಂಪಿಯ ಮತಂಗವನ್ನೇರಿ ನಿಂತಾಗ
ಸ್ವರ್ಗ, ಭೂಮಿಗಳಂತರದ ವೈಶಾಲ್ಯದಾಘಾತ!
ಕಗ್ಗಲ್ಲುಗಳ ತಂಪು ಮೈಯ್ಯನೆ ತಿದ್ದಿ ಬಂದ ತಂಗಾಳಿ
ಪೂರ್ವದಿಗಂತಕ್ಕೆ ನುಗ್ಗಿದೆ ಪಂಪೆಯ ನೀರು!
ಸಾವಿರಾರು ಜೀವಗಳ ಕ್ಷುದ್ರ ಬದುಕ ನೋಡಬಹುದು
ಮತಂಗನ ಮಸ್ತಿಷ್ಕದ ಮೇಲಿನಿಂದ
ಸ್ವರ್ಣ ಸೂರ್ಯನಿಗೆ ಸಮಾನಾಂತರವಾಗಿ!
ಅನಂತಾನಂತ ಮೇಘಗಳ ಮುಗಿಲಿನಳೆಯುತ
ಗರುಡನ, ಭಾರದ್ವಾಜನ, ಗೀಜಗನ ಗೂಡುಗಳನ್ನು
ಇಣುಕುತ, ನಿನ್ನನ್ನೇ ನೀನು ನೋಡ ಬಹುದು
ಮತಂಗನ ಮಸ್ತಿಷ್ಕದಿಂದ!

- ಪ್ರಸನ್ನ ರೇವನ್

ಉದುರುತ್ತಿರುವ ಎಲೆಗಳು...

ಉದುರುತ್ತಿರುವ ಎಲೆಗಳು ನಿನ್ನ
ಸೀರೆಯ ನೆರಿಗೆಗಳನ್ನೆಲ್ಲ ಮುಚ್ಚಿಬಿಟ್ಟಿವೆ!
ನಿನ್ನ ನೋಟದಲಿ ಬಂದಿಯಾದ
ಕಣ್ಣುಗಳಿಗೆ ಸೂರ್ಯಾಸ್ತ ಮರೆಯಾಗಿದೆ!
ಪ್ರೇಮ ಮತ್ತನಾಗಿ ಆ ಹೊಳೆಯಲ್ಲಿ ಕಂಡ
ಚಂದ್ರನತ್ತ ನೆಡೆದರೆ, ಹಕ್ಕಿಗಳ ಚಿಲಿಪಿಲಿ
ಮುಗಿಯತ್ತಲಿದೆ, ಬಿಸಿಲ ಕಂಡ ಚಿಟ್ಟೆಗಳಂತೆ
ಜನವಿಹೀನ ಏಕಾಂತ ನುಸುಳಿದೆ!

- ಪ್ರಸನ್ನ ರೇವನ್

ಕೆನ್ನೆ ಮೇಲೊಂದು ಮಳೆಹನಿ ಬಿದ್ದಾಗ

ಕೆನ್ನೆ ಮೇಲೊಂದು ಮಳೆಹನಿ ಬಿದ್ದಾಗ..
ಹೃದಯದ ಅಂಚಿನಲ್ಲಿ ನೀನು ನಕ್ಕಂತೆ
ಮಾಗಿಯ ಛಳಿಗಾಳಿಯೊಂದು ಸುಯ್ದಾಗ...
ರೋಮ ರೋಮಕ್ಕೆಲ್ಲಾ ನಿನ್ನ ನೆನಪು
ಬಿರು ಬೇಸಗೆಯಲ್ಲಿ ತಣ್ಣೀರು ಕಂಡಾಗ....
ನಿನ್ನ ಪ್ರೀತಿಯ ಸುವಾಸನೆ ಆವಾಹಿಸಿದಂತೆ
ಜನರಿಲ್ಲದ ದಾರಿಯಲ್ಲಿ ಪ್ರೇಮಿಗಳ ಕಂಡಾಗ
ನಮ್ಮ ಅನಂತ ಅಗಲಿಕೆಯ ನೆನದು
ಬದುಕೇ ಅರ್ಥ ಹೀನವಾದಂತೆ!

- ಪ್ರಸನ್ನ ರೇವನ್

Wednesday, July 26, 2006

ಅವಳ ಭರವಸೆಯ ಭಾಷೆಗೆ...

ಅವಳ ಭರವಸೆಯ ಭಾಷೆಗೆ
ಅರ್ಥವಿಲ್ಲದಂತೆ ಮರೆಯಾದಳು
ಹಗಲೇ ಅರ್ಧ ಜಾರಿದ ಚಂದ್ರನಂತೆ
ವಿರಹದ ಹಾಳೆಯ ಮೇಲೆ ತಡಬಡಿಸಿ
ನೋವಿನ ಕವಿತೆಗಳ ಮೊಡಿಸಲು ಹೊರಟಾಗ
ರಾತ್ರಿ ಪಾಳಿಯ ಕಾವಲುಗಾರನೆಂದ 'ಎಚ್ಚರ'

ಕಿಟಕಿಯಿಂದ ನೋಡಿದರೆ ಕಪ್ಪು
ಸರೋವರದ ಸುತ್ತ ದೀಪದ ಸಾಲು
ಸಂಪಿಗೆಯ ಮರದ ಸವಿಗಾಳಿ ತಂದಿದೆ
ಹುಡುಕಿದರೂ ಸಿಗದ ಕವಿತೆಗಳ ನೆರಳು
ಬರೆಯಲಾಗದೆ ಕುಳಿತ ಕವಿಗೊಂದು
ನಿಮ್ನ ನೆರಳು, ನೆನಪಿನಲ್ಲಿ ಸುಳಿದಾಡುವ ಹೆರಳು!

- ಪ್ರಸನ್ನ ರೇವಣ್ಣ

ಮರಳಿ ಬರುವೆ ಮತ್ತೆ, ಹೇಳಲಾಗದು ಸಮಯ...

ಮರಳಿ ಬರುವೆ ಮತ್ತೆ, ಹೇಳಲಾಗದು ಸಮಯ
ದಟ್ಟಕಾಡುಗಳ ಜಡಿಮಳೆಯನು ಹಾದು
ಬಯಲು ಸೀಮೆಗಳ ಗುಡುಗು ಮಿಂಚನುದಾಟಿ
ಸಮುದ್ರಗಳ ಭೋರ್ಗರೆತವನು ಮೀರಿ
ಪಚ್ಚೆ ಪರ್ವತಗಳ ಮೇಲೆ ಕಾರ್ಮೋಡಗಳ ನಡುವೆ ಹಾರಿ
ಮರಳಿ ಬರುವೆ ಮತ್ತೆ ನಿನ್ನೆಡೆಗೆ
ನಮ್ಮ ಮನೆಯ ಹೊಸಲ ದೀಪ ಹಚ್ಚಲು
ಹಲ ನಾಡುಗಳ ಪಯಣದ ಸುದ್ದಿ ಬಿಚ್ಚಲು!

- ಪ್ರಸನ್ನ ರೇವಣ್ಣ

Wednesday, July 19, 2006

ನಿನ್ನೆ ರಾತ್ರಿ ಸುರಿದ ಮಳೆಯ ತೇವದಿಂದ ...

ನಿನ್ನೆ ರಾತ್ರಿ ಸುರಿದ ಮಳೆಯ ತೇವದಿಂದ
ಬೆಣ್ಣೆಯಂತಾಗಿದೆ ನಿನ್ನ ಮನೆಯ ರಸ್ತೆ
ತೊಳೆದಿದೆ ಬಿದಿರೆಲೆಗಳ ಸಾಲು
ಸುರಿದಂತಾಗಿದೆ ಬಿಳಿ ಗುಲಾಬಿಗಳ ಮೇಲೆ ಹಾಲು
ಮನೆಯ ಗೇಟಿನಂಚಿನಲಿ ದಾಸವಾಳಗಳ
ನಡುವೆ ಅರಳಿದೆ ಕಮಲ ಮೊಗ
ಕುತೂಹಲದ ಕುಡಿನೋಟ,
ಇಣುಕು ನೋಟ, ಕಣ್ಣಾಟಗಳ ಬೀರಿ
ಕೊಲ್ಲುತಿದೆ, ಕಾಡುತಿದೆ, ಅಣಕುತಿದೆ
ಒಮ್ಮೆ ಕಂಡು ಮತ್ತೊಮ್ಮೆ ಮಾಯವಾಗಿ
ಜವನದಲಿ ಜವಬಾಧೆಯ ತೋರುತಿದೆ!

- ಪ್ರಸನ್ನ ರೇವಣ್ಣ

Tuesday, July 18, 2006

ನಮ್ಮಿಬ್ಬರ ಕವಿತೆ...

ಸೂರ್ಯನಂತೆ ನೀನು ನಿನ್ನ ಲೀಲಾಮಯ
ಸೌಂದರ್ಯದ ಯಜ್ಞಕುಂಡದ ಹವಿಸ್ಸು
ನಿನ್ನ ಚಂಚಲತೆ

ತರಂಗ ತರಂಗವಾಗಿ ದೂರ ಹಬ್ಬಿರುವ
ದಿಗಂತರೂಪಿ ನಿಹಾರಿಕೆಗಳಂತೆ
ಅಸ್ಪಷ್ಟವಾದರೂ ಪುಲ್ಲಃ ಪ್ರಪುಲ್ಲಿತವಾಗಿ
ಪ್ರಸ್ಪುಟವಾಗಬಲ್ಲ ಭಾವನ ದ್ವನಿಜೇನು
ನನ್ನ ಪ್ರೇಮೋತ್ಕರ್ಷ

ನಿನ್ನ ನೆನಪುಗಳ ಮಾರೀಚಿಕೆಗಳನ್ನೇರಿ
ಮನವೆಂಬ ಸ್ನಿಗ್ದ ಕಾನನದಲ್ಲಿ
ಸೌಮ್ಯಶ್ವೇತ ಜ್ಯೋತ್ಸ್ನೆಯಲ್ಲಿ
ನಿನ್ನನ್ನು ಹುಡುಕುವ ವಿಫಲ ಯತ್ನವೇ
ನಮ್ಮ ಸಂಬಂಧ

ಕಿರಣವಿಹೀನ ರಾಗಗಳಂತೆ, ದಶಂಬರದ
ಕುಳಿರ್ಗಾಳಿಯ ಪ್ರಭಾವದಿಂದ
ಶುಷ್ಕಪರ್ಣಗಳ ಕಳೆದ ವೃಕ್ಷದೇವಿಯಂತೆ
ನಿಸ್ತೇಜರಾಗಿರುವುದು ನಮ್ಮ ಅರ್ವಾಚೀನ
ಪ್ರೇಮ ನಿಷ್ಪತ್ತಿಯೇ ಗೆಳತಿ?

- ಪ್ರಸನ್ನ ರೇವಣ್ಣ

ನೆನಪುಗಳೆಂಬ ಗೋರಿಗಳು...

ನನ್ನ ಬದುಕೊಂದು ಬರಡು
ಒಣ ಹುಣಸೆಯ ಕೊರಡು

ಹಸಿರಾದ ಹಾವಿನಂತೆ ಅದು
ಅದರ ಹಸಿರು ತೋರಿಕೆಯದು
ವಿಷವಿಲ್ಲವಿದಕೆ
ಸಖಿ ಹತ್ತಿರವಿಲ್ಲ ಅದು ಬದುಕೆ?

ಸತ್ವ ಸುವಿಚಾರಗಳು ತಣಿಸುತ್ತವೆ
ನಿಶ್ಚಲವಾದ ಮನಸಿಗೆ ಸಿಹಿ ಉಣಿಸುತ್ತವೆ
ದೇಹದ ಮನಸ್ಸಿಗೆ ಸುಡುವುದೊಂದು ಗೊತ್ತು
ಮನಸ್ಸಿನ ಮನಸು ನೋಡುವುದು ಸತ್ತು

ಕವಿತೆ ಹುಟ್ಟುತ್ತವೆ ಸಮಾಧಾನಕ್ಕಾಗಿ
ನೆನಪುಗಳ ಗೋರಿಯ ಕಟ್ಟುವುದಕ್ಕಾಗಿ

ನೆನಪುಗಳು ಸಾಯುವುದಿಲ್ಲ ಅಲ್ಲವೇ?
ಗೋರಿಯೂ ನೆನಪಿಗಾಗಿ ಅಲ್ಲವೆ?

- ಪ್ರಸನ್ನ ರೇವಣ್ಣ

Tuesday, July 11, 2006

ನಾಗಪಂಚಮಿಯಂದು ಜೋಕಾಲಿ ಜೀಕುವಾಗ...

ನಾಗಪಂಚಮಿಯಂದು ಜೋಕಾಲಿ ಜೀಕುವಾಗ
ಸುರಿಯಿತು ಮಳೆ ಬೀಸಿತು ಗಾಳಿಯು ವೇಗ
ಮಳೆ ಹನಿಗಳೊಂದಿಗೆ ತೇಲಿದೆವು
ನಾನು ನನ್ನ ಗೆಳತಿ, ಹಾರುವಂತೆ ಹಕ್ಕಿ

ಮಿಂಚಿನ ಬೆಳಕಿಗೆ ಗುಡುಗಿನ ಸದ್ದಿಗೆ
ಕಿಂಕಿಣಿಸುತ್ತಿದೆ ನಮ್ಮಯ ಕೇಕೆ
ಹರಿಯುವ ನೀರಿನ ಜುಳು ಜುಳು ನಾದ
ಉಲಿದಿದೆ ಪ್ರಕೃತಿ ಗಾನ

ಹನಿಗಳ ಪರದೆಯ ಮಧ್ಯೆ
ಮಾವಿನ ಮರಗಳ ಶಯ್ಯೆ
ಬೆಚ್ಚನೆ ಪ್ರೇಮ ಹಚ್ಚನೆ ಮರದೆಲೆ
ತನ್ನಾತ್ಮನು ಪರವಶವಲ್ಲೆ!

- ಪ್ರಸನ್ನ

ದಟ್ಟ ಹರಿದ್ವರ್ಣದ ಕಂಬಳಿಯನೊದ್ದ...

ದಟ್ಟ ಹರಿದ್ವರ್ಣದ ಕಂಬಳಿಯನೊದ್ದ
ಆರ್ದ್ರ ಪರ್ವತಗಳ ನಡುವೆ ಕಿರಿದಾಗಿ
ಏರಿದೆ ಹರಿತವಾದ ದಾರಿ
ಮೇಲಿನ ಬಿಳಿ ಮೋಡಗಳ ತಳ್ಳಿ
ಬಣ್ಣ ಬಣ್ಣದ ಚುಕ್ಕಿಯಂತರಳಿದೆ ಚಿಕ್ಕ ಹಳ್ಳಿ

ಹೊಗಳ ಕೆಂಪ ಮೀರಿಸಿ ಬಿರಿದಿದೆ ಆಲದ ಚಿಗುರು
ದೊಡ್ಡ ತೇಗದ ಮರಗಳನಪ್ಪಿ ಬಗ್ಗಿಸಿದೆ ಚಿಕ್ಕ ಬಳ್ಳಿ
ಪ್ರಕೃತಿಯ ಅಂಕೆ ಮೀರಿ ಬೆಳೆವುದು ಜೀವ
ಅದಕ್ಕೆ ಬೇಕು ಶಮ, ಸಂಯಮದ ಭಾವ
ಸತ್ಯದ ಅಂಕೆ ಮೀರಿದರೆ ಹುಟ್ಟುವುದೇ ಕಾವ?

- ಪ್ರಸನ್ನ

ನನ್ನ ಮುತ್ತ್ತಜ್ಜನ ವಯಸ್ಸಿನ ಮಾವಿನಮರ...

ನನ್ನ ಮುತ್ತ್ತಜ್ಜನ ವಯಸ್ಸಿನ
ಮಾವಿನ ಮರ ಮೌನವಾಗಿ ಬಿಕ್ಕುತ್ತಿದೆ...
ತನ್ನ ಮೇಲು ಮರಕೋತಿ ಆಡಬೇಕಾದ ಮಕ್ಕಳು
ಪಟ್ಟಣದ ಚಿಕ್ಕ ಓಣಿಮನೆಗಳಲ್ಲಿ
ಚಿತ್ರದ ಪೆಟ್ಟಿಗೆ ದೃಷ್ಟಿಸುವುದ ಕಂಡು...

ಅಲ್ಲೇ ಕೆಳಗಿನ ಬಾವಿ ಬೊಬ್ಬಿಡುತಿದೆ
ತನ್ನ ಒಡಲಿಗೆ ಮಕ್ಕಳು ಜಿಗಿದು
ಈಜಿ ನಲಿದಾಡಿ ಗುದ್ದಾಡಿ
ಕಚಗುಳಿಯಿಡುತ್ತಿದ್ದ ದಿನಗಳ ನೆನೆದು

ಬೇಲಿಯಲ್ಲಿನ ಮೂರು ನೆಲ್ಲಿಯ
ಮರಗಳ ಕೆಳಗೆ ರಾಶಿ ಹಣ್ಣುಗಳು
ಹೆಕ್ಕುವ ಹುಡುಗಿಯರಿಲ್ಲ...
ಹಕ್ಕಿಗಳಿಲ್ಲ, ಅಳಿದ ಅಳಿಲುಗಳಿಲ್ಲ

ದೂರದಲ್ಲೆಲ್ಲೋ ದೊಡ್ಡ ಯಂತ್ರ
ಇತ್ತಲೇ ನುಗ್ಗುತ್ತಿದೆ...
ತಮ್ಮ ಪಕ್ಕದ ತೋಟದ
ಮರಗಳ ಉರುಳಿಸುತ್ತಾ
ಹಿಂದೆ ಮರಕೋತಿಯಾಡಿದ್ದ
ಹುಡುಗ ನುಗ್ಗುತ್ತಿದ್ದಾನೆ
ಭೋರ್ಗರೆಯುವ ಯಂತ್ರದ
ಮಂತ್ರ ಊದುತ್ತಾ...

- ಪ್ರಸನ್ನ ರೇವನ್

Monday, July 10, 2006

ಬಯಲು ಸೀಮೆಯಲ್ಲಿನ...

ಬಯಲು ಸೀಮೆಯಲ್ಲಿನ
ನೆಲದ ಬಿರುಕುಗಳು ಅಲ್ಲಿಯ
ಗಂಡಸರ ಬಾಹುಗಳಂತೆ
ಬಲು ಕಠಿಣ ಮತ್ತು ಕಲಾತ್ಮಕ

ಆ ಬಿರುಕುಗಳನ್ನು ಸೀಳಿ
ಚಿಕ್ಕ ಇಬ್ಬನಿಯ ತೇವ
ಗರಿಕೆ ಹುಲ್ಲನ್ನು ಹುಟ್ಟಿಸುತ್ತದೆ
ಎರೆ ಬಣ್ಣದ ಬಾಹುಗಳು
ಮೈಲುಗಟ್ಟಲೆ ಭೂಮಿ
ಅಗೆಯುವಂತೆ

ಬಯಲಿನ ಗಾಳಿಯಲ್ಲಿ
ಅಪರೂಪದ ಸುಗಂಧಗಳು
ನೆನಪಿಸುತ್ತವೆ ಅಲ್ಲಿನ ಹೆಣ್ಣುಗಳ
ಮುಗ್ಧ ಸೌಂದರ್ಯವನ್ನು

ಬಯಲಿನ ಆಗಸದಲ್ಲಿ ಅಲೆಯುವ
ಹಕ್ಕಿಯೊಂದು ತನ್ನ ಜೋಡಿಯನ್ನು
ಬೆನ್ನಟ್ಟಿದೆ, ಆ ಆಗಸದ ಕೆಳಗೆ
ಬಂಡಿಯ ತಳದ ನೆರಳಿನಲ್ಲಿ
ಪಿಸುಮಾತಾಡುವ ಪ್ರೇಮಿಗಳಂತೆ

ದೂರದಲ್ಲೊಂದು ಕೃಷ್ಣ ಮೃಗಗಳ
ಹಿಂಡು ಅಲೆಯುತ್ತಿವೆ ನೀರ ಹುಡುಕಿ
ಬೆದರುತ್ತವೆ ಚಿಮ್ಮುತ್ತವೆ
ಮರೀಚಿಕೆಯಲ್ಲಿ ತಮ್ಮ ಪ್ರತಿಫಲನವ
ತಾವೆ ಕಂಡು

ಶ್ರಾವಣದ ಸಂಜೆಗಳಲ್ಲಿ ಬಯಲು
ಸೀಮೆಯ ತುಂಬಿದೆ ಶಿವನ ಹೆಸರು
ರೊಟ್ಟಿ ಬಡಿಯುವ ಸದ್ದಿಗೆ ತಾಳವಾಗಿ
ಶಿಲ್ಪಿಯ ಕೆತ್ತನೆಗೆ ಪದವಾಗಿ
ನ್ಯಾಯದ ಮಾತುಗಳಿಗೆ ಸಾಕ್ಷಿಯಾಗಿ
ಚಿಕ್ಕ ಕಂದನ ತೊದಲಿಗೆ ದನಿಯಾಗಿ

- ಪ್ರಸನ್ನ ರೇವಣ್ಣ

Sunday, July 09, 2006

ನೇಸರನ ಬೆಳಕು ಥಳಥಳಿಸುತ್ತಿದ್ದ...

ನೇಸರನ ಬೆಳಕು ಥಳಥಳಿಸುತ್ತಿದ್ದ
ಕೊಡವನ್ನೆತ್ತಿದಳು ಬಾಲೆ ಬಾವಿಯಿಂದ
ಚಿಮ್ಮಿದಳು ಬೊಗಸೆ ನೀರನ್ನು ಆಕಾಶದತ್ತ!
ಎತ್ತರಕ್ಕೇರಿದ ನೀರು ಹೊರಳಿತು
ದೇಗುಲದ ಅಂಗಳದತ್ತ!
ಚಿನ್ನದ ಗುಲಾಬಿಯಂತಹ ಬೆಳಗು ಹೊತ್ತಿಸಿತು
ದೇಗುಲದ ಶಿಲಾ ಗೋಪುರವನ್ನು!
ಮರಗಳ ತರಗಲೆಗಳೇರಿದುವು
ಗಾಳಿಯೊಂದಿಗೆ ಆಕಾಶವನ್ನು!
ನಿನ್ನೆ ತಾನೆ ನಿವೃತ್ತಿ ಹೊಂದಿದ ರಾತ್ರಿ
ಮರಳಿಬಂದಿದೆ ಇಂದು ನಮ್ಮ ಊರಿಗೆ ಬೆಳಕಾಗಿ
ಒಣಗಿ ಬಿರಿದ ನೆಲಕೆ ಜೀವದ ಹನಿಯಾಗಿ!

- ಪ್ರಸನ್ನ ರೇವನ್

ಕನಸುಗಳಿಲ್ಲದ ಮುಂಜಾನೆಯೆಂದರೆ...

ಕನಸುಗಳಿಲ್ಲದ ಮುಂಜಾನೆಯೆಂದರೆ
ಬಿಸಿಲೂ ಮಳೆಯೂ ಇಲ್ಲದ ಆಕಾಶದಂತೆ
ಕನಸುಗಳನ್ನು ಹುಟ್ಟಿಸದ ಮನಸೆಂದರೆ
ಅರಳೀ ಮರವಿಲ್ಲದ ಕಟ್ಟೆಯಂತೆ
ಕನಸುಗಳಿದ್ದೂ ಸಾಧಿಸದ ಬದುಕೆಂದರೆ
ಕಣ್ಣುಗಳಿಲ್ಲದಿದ್ದರೂ ನೋಡದ ಅರಸಿಕರಂತೆ!

- ಪ್ರಸನ್ನ ರೇ

Thursday, July 06, 2006

ನಿದ್ದೆಯಿಲ್ಲದ ರಾತ್ರಿ ಹೊಳೆಯುತ್ತಿದೆ ದೀಪ ಹಣತೆಯಲ್ಲಿ

ನಿದ್ದೆಯಿಲ್ಲದ ರಾತ್ರಿ ಹೊಳೆಯುತ್ತಿದೆ ದೀಪ ಹಣತೆಯಲ್ಲಿ
ಗಾಢವಾದಂತೆ ಕಪ್ಪು ಸುಳಿದಾಡುತ್ತಿದೆ ಗಾಳಿ ಕೋಣೆಯಲ್ಲಿ
ಭಾಸವೆನಿಸಿದೆ ತಟ ತಟನೆ ಹನಿ ಬಿದ್ದ ಸದ್ದು ಹಂಚಿನಿಂದ
ಘಮ್ಮನೆಯ ಸೌರಭ ಸೂಸುತ್ತಿದೆ ಮಣ್ಣಿನಿಂದ
ಹಗಲಲ್ಲೆದ್ದ ಧೂಳು ಮಲಗುತ್ತಿದೆ ಭೂಮಿಯಪ್ಪಿ
ಗುಡುಗು ಗುಡುಗುಡುತ್ತಿದೆ ತಾಳತಪ್ಪಿ!

- ಪ್ರಸನ್ನ ರೇವನ್

ಆ ಕಾಡಿನ ದಾರಿಯಲ್ಲೊಂದು ಬಿದಿರಿನ ಪೆಳೆ

ಆ ಕಾಡಿನ ದಾರಿಯಲ್ಲೊಂದು ಬಿದಿರಿನ ಪೆಳೆ
ಹನಿ ಹನಿ ನೀರುದುರಿಸಿ ಬಾರಮಾಡಿದೆ ಮಳೆ
ನೆಲಕ್ಕೆ ಬಾಗಿದೆ ಬಿದಿರು ಆ ಗುಹೆಯ ಸುತ್ತ ಹಸಿರು
ಓಂಕಾರದ ಮರ್ಮರ ಮರುತನ ಬಿದುರಿನ ಗಾನ
ನೆಲದಲ್ಲರಡಿದ ಪಚ್ಚೆ ಹುಲ್ಲಿನ ಮೌನ
ಪ್ರಕೃತಿ ಧ್ಯಾನದಿ ದಟ್ಟಾರಣ್ಯವೇ ಗೌಣ!

- ಪ್ರಸನ್ನ ರೇವನ್

ಇಬ್ಬನಿ ಕರಗಿದ ನೀರಿನಿಂದ ಒದ್ದೆಯಾಗಿದೆ ನನ್ನ ಹೃದಯ...

ಇಬ್ಬನಿ ಕರಗಿದ ನೀರಿನಿಂದ ಒದ್ದೆಯಾಗಿದೆ ನನ್ನ ಹೃದಯ
ವಸಂತನ ಬಿಸಿಲ್ಮಳೆಯ ಕಾಮನಬಿಲ್ಲಿನಿಂದ ಬಣ್ಣವಾಗಿದೆ ನನ್ನ ಬಟ್ಟೆ
ದೇಗುಲದ ಹೆಬ್ಬಾಗಿಲಿನಿಂದ ನನ್ನ ಮನದೊಳಗೆ ನೆಡೆದಾಗ
ಕೇಳಿಸಿತು ಸುಮಧುರ ಘಂಟಾನಾದ, ಅಲ್ಲೇ ಭಾರದ್ವಾಜ ಪಕ್ಷಿ
ಹಾರಿ ಕುಳಿತಿದೆ ಚಿನ್ನದ ಹೂಗಳ ಕಮಾನಿನ ಮೇಲೆ!
ಗುಲಾಬಿ ಪಾರಿವಾಳಗಳು ಮುತ್ತಿಡುತ್ತಿವೆ ಒಂದನ್ನೊಂದು
ವಿಸ್ಮಯದ ವಿಸ್ತರಣೆ ನಿನ್ನ ನೆನಪು, ಕವಿತೆ ಬಿರಿವ ಒನಪು!

- ಪ್ರಸನ್ನ ರೇವನ್

ಕಡುನೀಲಿ ನದಿಯಲ್ಲೊಂದು ಶ್ವೇತಪಕ್ಷಿ

ಕಡುನೀಲಿ ನದಿಯಲ್ಲೊಂದು ಶ್ವೇತಪಕ್ಷಿ
ಹರಿದ್ವರ್ಣದ ಬೆಟ್ಟದಲ್ಲಿ ಅರಳಲಿವೆ ರಾಶಿ ಪುಷ್ಪ
ಕಪ್ಪು ರಾತ್ರಿ ತುಂಬಾ ಚಂದ್ರ ಮೇಘರ ತಳಮಳ
ಇಬ್ಬನಿ ಜಾರಿದೆ ಹುಲ್ಲಿನ ಬೇರಿಗೆ
ಆಗಲಿದೆ ವೇಗದಿ ಈ ವಸಂತನ ನಿರ್ಗಮನ
ಎಂದು ಆಗಲಿದೆ ನಿನ್ನ ಆಗಮನ?

- ಪ್ರಸನ್ನ ರೇವನ್

ಯಾರ ಮನೆಯಿಂದ ಹರಡುತ್ತಿದೆ ಆ ಸುಪ್ತ ವೇಣುಧ್ವನಿ?

ಯಾರ ಮನೆಯಿಂದ ಹರಡುತ್ತಿದೆ ಆ ಸುಪ್ತ ವೇಣುಧ್ವನಿ?
ರಿತು ಶರದೃವಿನ ಅರ್ಭಟದಲ್ಲೂ ಅಡಗದ ಆ ದಿವ್ಯದ್ವನಿ...
ಸರಿರಾತ್ರಿಗಳ ಜಡಿಮಳೆಯಲ್ಲರಳಿದೆ ಬ್ರಹ್ಮ ಕಮಲ!
ಮನಸನು ತುಂಬಿದೆ ಆನಂದದ ತಾಳ!

- ಪ್ರಸನ್ನ ರೇವನ್

Wednesday, July 05, 2006

ಮಳೆನಿಂತ ತಂಗಾಳಿಯ ರಾತ್ರಿ...

ಮಳೆನಿಂತ ತಂಗಾಳಿಯ ರಾತ್ರಿ, ಸರೋವರದ ದಡದಲ್ಲಿ ಶಮೀವೃಕ್ಷ
ದಿಟ್ಟಿಸುತ್ತಿದ್ದಾಳೆ ತರುಣಿ...
ಕೆಲ ಅಡಿಗಳಂತರದಲ್ಲಿ ತೇಲುತ್ತಿದೆ ಶೀತಲ ಚಂದ್ರನ ಪ್ರತಿಪಲನ,
ಹತ್ತಿರದಲ್ಲೇ ಮಿಣುಕುತ್ತಿದೆ ಲಾಟೀನಿನ ಬೆಳಕು ಮನೆಯಲ್ಲಿ
ಪಕ್ಕದ ಪೊದೆಯ ಗೂಡಿನಲ್ಲೆರಡು ಕೊಕ್ಕರೆಗಳ ಮಿಲನ...
ಅಲ್ಲೇ ನಿಂತ ದೋಣಿಯ ಹಿಂದೆ ಮೀನೊಂದು ಚಿಮ್ಮಿತು ತನನ...

- ಪ್ರಸನ್ನ ರೇವನ್

Tuesday, July 04, 2006

ತುಂಗಭದ್ರೆಯಲ್ಲಿ ಭರತಿ ಬಿದ್ದಾಗ

ಭದ್ರೆಯಾಗಿ ಕೆಂದನ್ನೂ, ತುಂಗೆಯಾಗಿ ಹಸಿರೆಲೆಗಳನ್ನೂ ತಂದ
ತುಂಗಭದ್ರೆ ಸಂಗಮದಲ್ಲಿ ವರುಣೋನ್ಮತ್ತೆಯಾಗಿ
ಹರಿಹರದಲ್ಲಿ ದೇವನ ಪಾದಗಳನ್ನು ತೊಳೆಯುವಂತೆ,
ಅವಳ ಜಲಗರ್ಭದ ಮೇಲೆ ತೇಲುತ್ತಿದೆ ಹಾಯಿದೋಣಿ,
ಮಳೆಗಾಲದಲ್ಲೂ ಮೀನುಗಳನ್ನು ಅರಸುತ್ತಿದೆ ಮಿಂಚುಳ್ಳಿ,
ತಮ್ಮ ಕಾಯಕಗಳನ್ನು ಪ್ರೀತಿಸುತ್ತಾ ಚಳಿಗಾಲಕ್ಕೆ
ತಮ್ಮ ಮನೆಗಳನ್ನು ಸೇರುವಂತೆ!

- ಪ್ರಸನ್ನ ರೇವನ್

ಮುಂಗಾರಿನ ಪುಳಕಗಳನ್ನು ಸ್ವಾಗತಿಸುತ್ತಾ...

ಮೊನ್ನೆ ಬಿಸಿಲ್ಮಳೆಯೊಂದು ನನ್ನನ್ನು ತೋಯೆಸಿದಾಗ ನನಗೆ ನೆನಪಾಗಿದ್ದು ನನ್ನ ಬಾಲ್ಯ... ಚಿನ್ನದ ಬಿಸಿಲಿನಲ್ಲಿ ಮುಂಗಾರಿನ ಮಳೆಹನಿಗಳು ರಪರಪನೆ ಸುರಿದಾಗ ಆದ ಪುಳಕ! ಹಂಚಿನ ಮನೆಯಲ್ಲಿದ್ದಾಗ ಮಳೆಯ ತಾಳ ಮತ್ತು ಗುಡುಗಿನ ಮೇಳದ ಸದ್ದು ತರುತ್ತಿದ್ದ ನಾದ... ತೋಟದ ಮನೆಯ ಮೊಗಸಾಲೆಯಿಂದ ಹನಿಗಳು ನೆಲಕ್ಕೆ ಅಪ್ಪಳಿಸುತ್ತಿದ್ದಾಗ ಆಗುತ್ತಿದ್ದ ಚಿಕ್ಕ ಗುಂಡಿ ಮತ್ತು ಪಳ ಪಳ ಸದ್ದು! ಇಂತಹ ನೆನೆಪುಗಳನ್ನು ನಿಮ್ಮೊಡನೆ ಹಂಚಿಕೊಳ್ಳುವ ಬಯಕೆಯೇ ಈ ಬ್ಲಾಗು!!!