Thursday, June 22, 2023

ಯೂಸ್ಲೆಸ್ ಕವಿತೆ

ಬೆಟ್ಟದಲ್ಲಿ ಕಳೆದು ಹೋದ 
ಕೆಂಪು ಹೂವ ಘಮಲು 
ಕೈಜಾರಿ ಠಳ್ಳನೆ ಬಿದ್ದ  
ಕಡುವೈನಿನ ಚಿತ್ತಾರದ ಅಮಲು 

ಚಂದ್ರ ಕಳೆದ ಬತ್ತಲೆ ರಾತ್ರಿ
ಸುರಿಸಿದ ಉಲ್ಕೆಗಳ ಬಣ್ಣ ಸಾವಿರ
ತಂಗಾಳಿಗೆ ಮೈಯ್ಯೊಡ್ಡಿದ 
ಕಂಗಳ ಹಸಿವಿನ ಕಾತರ 

ಸಾಯುತ್ತಲೇ ಉರಿಯುತ್ತಿದೆ
ತಿಳಿಹಳದಿಯ ಮುಂಬತ್ತಿ 
ಕುಣಿ ಕುಣಿಯುತ್ತಿದೆ 
ಹೂದಾನಿಯ ನೆರಳು ಕೈಯ್ಯೆತ್ತಿ 

ಕತ್ತಲ ದಿಟ್ಟಿಸುತ್ತಲೆ ಕಾಣುವ
ಕನಸುಗಳಲ್ಲೆಷ್ಟು ವ್ಯರ್ಥ? 
ಪರದೆಯ ಮೇಲೆ ಮೂಡಿ ಮಡಿಯುವ 
ಈ ನುಡಿಗಳಿಗಿದೆಯೆ ಅರ್ಥ? 

ಪ್ರಸನ್ನ