Thursday, August 17, 2006

ತಿಳಿಯಾದ ಮುಗಿಲುಗನ್ನಡಿಯೊಂದು...

ತಿಳಿಯಾದ ಮುಗಿಲುಗನ್ನಡಿಯೊಂದು
ಮಲಗಿದೆ ನನ್ನೆದುರಿಗೆ!
ಪೂರ್ವದಲ್ಲಿನ ಪ್ರೇಮಿ, ಎದುರಿನ
ಚಂದ್ರಕಾಂತೆಯನ್ನು ನೋಡಲು ಹೊರಟಾಗ
ಮಧ್ಯೆ ಇಣುಕುತ್ತಾನೆ!

ನೋಡುವವರಿಗೆ ಬೇಕಾದದ್ದು ಕಾಣಿಸಬಹುದು
ಕಾಣಿಸುತ್ತದೆ, ನೋಡುವ ಮಿಂಚುಳ್ಳಿಗಳಿಗೆ
ಹೊಳೆಯುವ ಮೀನುಗಳ ರಾಶಿ!
ಆಗಾಗ ಕನ್ನಡಿಯನ್ನು ಚುಂಬಿಸುವ ಮೇಘಗಳಿಗೆ
ಕಾಣಿಸಬಹುದು ಎದೆಯೊಳಗಿನ ಮಿಂಚು!

ಮುಗಿಲುಗನ್ನಡಿಯೊಳಗಿನ ಕವಿತೆಯೆಂಬಂತೆ
ಕಮಲಗಳು ಅರಳುತ್ತವೆ ಅಲ್ಲಲ್ಲಿ, ಹದಿಹರೆಯಕೆ
ಬರುವ ಗುಲಾಬಿ ಮೊಡವೆಗಳಂತೆ
ದೂರದ ರವಿಯ ಸೆಳೆತಕ್ಕೆ ನಾಚಿ!

ದೂರವಿರುವ ಭರವಸೆಗಳು ನಿನ್ನನ್ನೂ
ಪುಳಕಿಸಲಿ! ಹೋಗಿ ನೋಡು ನಿನ್ನ
ಹತ್ತಿರದ ಮುಗಿಲುಗನ್ನಡಿಯಲ್ಲಿ
ಒಮ್ಮೆ ನಿನ್ನನ್ನು!!

- ಪ್ರಸನ್ನ ರೇವಣ್ಣ

No comments: