Thursday, October 26, 2017

ಶಿಕಾರಿಪುರಶಿಕಾರಿಪುರ ಎಂದರೆ

ಮಿಡಿ ಮಾವು, ಬಾಳೆ ಮೀನು, ಗೌರೀಭತ್ತ,
ಯಾಡೇರು ಮಾರುವ ಗೋಡಂಬಿ ಹಣ್ಣು
ಅಡುಗೆ ಮನೆಯಲ್ಲಿ ಅಲ್ಲಲ್ಲಿ ಚಲ್ಲಿದ ಅಕ್ಕಿಯ ಗಂಜಿ
ಸಾಗುವಾನಿಮರದ ಮನೆಗಳ ನಡುವೆ
ಬರುವ ಅಡುಗೆ ಮನೆ ಹೊಗೆಯ ವಾಸನೆ...

ಹಚ್ಚಹಸುರಿನ ಭತ್ತದ ಗದ್ದೆಗಳ ನಡುವೆ
ಸಿಕ್ಕುವ ಬುರ್ಲಿ ಹಕ್ಕಿಗಳ ಚಿತ್ತಾರದ ಮೊಟ್ಟೆಗಳು
ಅಜ್ಜಿ ಮಾಡುತ್ತಿದ್ದ ಹುಲ್ಲೇಡಿ ಸಾರು
ವರ್ಣರಂಜಿತ ಜೀರುಗೊಂಬೆ...
ಅಜ್ಜನ ಅಂಗಿಯ ಬೆವರಿನ ಗಂಧ...

ಸಗಣಿ ಸಾರಿಸಿದ ಹಸಿರು ಕೇರಿ ಬೀದಿಯ
ತುಂಬಾ ನಗುವಿನ ರಂಗೋಲಿ
ಹೊಯ್ಯಪ್ಪಳ, ಮೊಸರು ಮೆಣಸಿನಕಾಯಿ
ಕರಿಬೇಟೆಯ ಸಾರು, ಸೆಣಗಿ ಹುಗ್ಗಿಯ ಘಮಲು

ಸ್ನಿಗ್ಧ ಚಲುವಿನ ಮುಗ್ಧ ಮುಖಗಳು
ಹಿತ್ತಲಿನ ಭೂತಪ್ಪ, ನಾಗರ ಕಲ್ಲು
ಮನೆಯೊಳಗೆ ಬೀರಪ್ಪನ ಹೊಳೆಯುವ ಅಲಗು
ಬಂಗಾರಬಣ್ಣದ ತಿಪ್ಪೆಯುದ್ದಕ್ಕೊ ಹರಡಿದ ಅಣಬೆ ಸಾಲು

ಅಲ್ಲೊಂದು ಇಲ್ಲೊಂದು ಹಳೆಯಮರ
ಸಂತೆಯುದ್ದಕ್ಕೊ ಮೈಚಾಚಿದ ದೇವಿಯ ನೆಲ ಶಿಲ್ಪ
ಕೆನ್ನೆ ಕಚ್ಚುವ, ನಗೆಚಾಟಿಕೆಯ ಚಿಕ್ಕಮ್ಮ, ಮಾವಂದಿರು
ದಿನಕೊಂದು ಹೊಸ ಹಾಡು ಹೊಸೆವ
ಜಾನಪದವೇ ಮೈವೆತ್ತಂತ ಅಜ್ಜಿಯ ಕೊರಳು...

ಅರವತ್ತಾದರೂ ರಾಶಿ ಸೌದೆಕೊಚ್ಚುವ ಅಜ್ಜ
ಸಣಿಗೆ ಹುಗ್ಗಿಯ ಸವಿ ಚಪ್ಪರಿಕೆ,
ಏದುಸಿರಿನ ಎತ್ತುಗಳ ಘಂಟೆಯ ನಾದ
ಗರಡಿಯಲಿ ಸಡ್ಡುಹೊಡೆದು ಸೆಣಸಿದ
ಮಲ್ಲರ ಬೆವರಿನ ಕೆಮ್ಮಣ್ಣಿನ ಘಮಲು...

ದೋ ಎಂದು ತೊಳೆವ ಮಳೆಯಲ್ಲೂ
ಹಂಚಿನ ಸಂದಿಯಿಂದ ಸೂಸುವ ಹೊಗೆ
ಅಲ್ಲಲ್ಲಿ ಕಾಣುವ ಹೊಂಡಗಳ ಮೇಲೆ
ಪಚ್ಛೆ ಹಾಸಿದಂತಿದ್ದ ಹಸಿರೆಲೆ
ಎಣ್ಣೆ ಕೊಡೆ ದ್ಯಾಮವ್ವಾ ಎಂದುಲಿಯುವ
ದೀಪಗಳಂತ ಹುಡುಗಿಯರ ದನಿಯಮಲು!

ಮುಗಿಯದ ಚಿತ್ರಗಳ, ನೆನಪುಗಳ
ಒಮ್ಮೊಮ್ಮೆ ಕನಸಿನಂತೆ ಕಾಣುವ ಊರು
ಷಿಕಾರಿಪುರ!

- ಪ್ರಸನ್ನ  ರೇವನ್No comments: