ತಟಕ್ಕನೆ ಬಿದ್ದ ಸಣ್ಣ ಮಳೆಹನಿಯೊಂದು
ಎಳೆ ಚಿಗುರಿನ ಮೇಲೆ ಬರೆದ ನೀರಿನ ಗೆರೆ
ಬೆಟ್ಟದ ನೆತ್ತಿಯ ಗಿಡ ಮರಗಳೊಳಗೆ
ತಣ್ಣಗೆ ಹಾಯ್ದು ಜಾರಿದ ಬೆಳ್ಮೋಡಗಳು
ಬಳ್ಳಿಗಿಂತ ಆಪ್ತವಾಗಿ ರೆಂಬೆಯನ್ನು
ಬೆಚ್ಚಗೆ ಅಪ್ಪಿದ ಮಿಡಿನಾಗರ
ಮುಟ್ಟಲಾಗದ ಬೈಗುಗೆಂಪಿನಲ್ಲಿ
ಅಡಗಿರುವ ಬಣ್ಣಗಳ ಓಕುಳಿ
ಮರಳ ಕಣಕ್ಕೆ ದಿನವೂ ಮುತ್ತಿಟ್ಟು
ಮುತ್ತಾಗಿಸುವ ಚಿಪ್ಪಿನೊಳಗಿನ ಜೀವದ ಕನಸು
ಬೆಳಕಿನ ನಿರೀಕ್ಷೆಯಿಂದ ನೆಲದಡಿಯ
ಕತ್ತಲಿನಲ್ಲಿ ಮೊಳೆಯುವ ಬೀಜದ ಕಾತರ
ಎಂದೋ ಹುಟ್ಟುವ ಮಗುವಿಗಾಗಿ
ಹಂಬಲಿಸುವ ತಾಯ ಮೊಲೆಗಳು
ಕಾಲವನ್ನು ಮೆಟ್ಟಿ ನಿಲ್ಲಲು ಪ್ರೀತಿಗಲ್ಲದೇ
ಮತ್ಯಾರಿಗೆ ಸಾಧ್ಯ?
- ಪ್ರಸನ್ನ ರೇವನ್
No comments:
Post a Comment