ಒಂದು ಹಾಡಿನ ಕ್ರೌರ್ಯ
ಸಂಗೀತ, ಮಾಧುರ್ಯ, ಕವಿತೆ ಇರಿಯಬಲ್ಲವು
ಚುಚ್ಚಬಲ್ಲವು, ಮತ್ತೆ ಮತ್ತೆ ಹಣಿಯಬಲ್ಲವು
ನೆನಪಿನ ಎದೆಗೂಡಿನಲ್ಲಿ ನುಸುಳಿ
ಕಾಪಿಟ್ಟಿದ್ದ ಸಣ್ಣ ನೆನಪಿನ ಕುಡಿಗೆಗಳನ್ನು
ಧ್ವಂಸಮಾಡಿಬಿಡಬಲ್ಲವು
ಒಂದು ಮಧುರ ಹಾಡಿನ ಕ್ರೌರ್ಯ
ನಿರ್ದಯಿಯಾದುದು, ಯಾವುದೋ
ಕಾಲಕ್ಕೆ ಎಳೆದೊಯ್ದು ಅಂದೆಂದೋ ಹತ್ತಿದ್ದ
ಕುಣಿಕೆಗೆ, ಶಿಲುಬೆಗೆ ಮತ್ತೆ ಏರಿಸಿಬಿಡಬಲ್ಲವು
ಒಂದು ಹಾಡಿನ ಸಾಲು ಮಹಾಶತ್ರು
ಕಿತ್ತುಹೋದ ಕೊಡವೆ, ಚಾಟಿಗಳನ್ನು
ಮತ್ತೆ ಹೊಸೆದು ಬಾರಿಸಬಲ್ಲದು, ಎಂದೋ ಸತ್ತ
ಸಂಬಂಧಗಳನ್ನು ಮತ್ತೆ ಬದುಕಿಸಿ, ನೆನಪಿಸಿ,
ನಿಮ್ಮೆದುರಿಗೆ ನಿಲ್ಲಿಸಿ ಬೆದರಿಸಬಲ್ಲವು
ಹೂವು, ಜೇನು, ಇಬ್ಬನಿ, ಆರ್ದ್ರತೆ, ಹಾಡು, ಹಸೆ,
ಅಕ್ಷರ, ಕನಸು, ಮನಸು ಎಲ್ಲವೂ ಕ್ರೂರಿಗಳೇ,
ನೀನು ಅಲ್ಲೆಲ್ಲೋ ಮೈಮರೆತಾಗ,
ಮಾಯದಿಂದ ಎದೆಯ ಒಳಗೋಣೆಯಲಿ ನುಸುಳಿ
ವಿಪ್ಲವವನ್ನೆಬ್ಬಿಸಿ ಇಂಥ ನೋವಿಗದ್ದಿದ ಸಾಲುಗಳನ್ನು
ಗೀಚಿಸಿಬಿಡುತ್ತವೆ. ಈ ಹಾಡುಗಳ ಕ್ರೌರ್ಯ ಅವರ್ಣನೀಯ
-ಪ್ರಸನ್ನ
No comments:
Post a Comment