Tuesday, March 04, 2025

ಇಂದಿನ ಈ ರಾತ್ರಿ

ಪರ್ಷಿಯನ್ ಕವಿ ಹುಷಾಂಗ್ ಎಬ್ತೆಹಾಜರ ಕವಿತೆ 

Tonight at night ನ ನನ್ನ ಭಾವಾನುವಾದ 

ಈ ಸರಿರಾತ್ರಿ

ಈ ಸರಿರಾತ್ರಿ ನನ್ನ ಹೃದಯದ ಕತೆ ಕೇಳು
ನಾಳೆ ಯಾವುದೋ ಕತೆಯಂತೆ ನನ್ನನ್ನೇ ಮರೆಯುವುದಿದೆ
ಈ ನನ್ನ ಬೊಗಸೆಯಲ್ಲಿ ನಿನ್ನ ಕೈ ಹಿಡಿಯಲಾರೆ 
ಹುಣ್ಣಿಮೆಯ ಚಂದ್ರನಂತ ನೀನು ಯಾರ ಕೈ ಹಿಡಿವೆ?
ಯಾವುದದು ನಿನ್ನೊಳಗಿಂದ ಉಕ್ಕುವ ಅಮಲು? 
ಮೊದಲ ಗುಟುಕಿಗೆ... ಮಹಾ ಕುಡುಕನ ಕುಡಿತ ಮೀರಿದ ನಶೆ  
ಮರುಕ್ಷಣವೇ ಹುಡುಕಿದರೂ ಸಿಗಲಾರದ ಮಾಯೆ!
ಹೆಂಡ ಕುದಿಯುತ್ತಿದೆ ನನ್ನ ಎದೆಯೊಳಗೆ, ಬಾ ನೋಡು 
ನೀನು ಕೇಳುವೆಯಾದರೆ, ನಿನ್ನ ರತ್ನದ ಕಿವಿಯೋಲೆಗಿಂತ 
ಚಂದದ ನನ್ನ ಮಾತೊಂದ ಹೇಳುವೆ 
ಈ ಜಗತ್ತಿನ ಬಟ್ಟಲು ಪ್ರೇಮಿಯ ರಕ್ತದಿಂದ ತುಂಬಿದೆ
ಅದನ್ನು ಹೀರುವಾಗ ಸ್ವಲ್ಪ ಗೌರವಿಸು ಅಷ್ಟು ಸಾಕು
ಕಡುಗಪ್ಪು ನೆರಳೇ ದೀಪದಂತೆ ನೀನೂ ಜ್ವಾಲೆಯನ್ನು ಹಬ್ಬಿಸುವೆ
ನಿನ್ನ ಮೌನ ತಬ್ಬಿದ ತುಟಿಯಿಂದ ಹರಡುವ ಕತೆಗಳಿಂದ! 

ಮೂಲ: ಹುಷಾಂಗ್ ಎಬ್ತೆಹಾಜ್ 
ಕನ್ನಡಕ್ಕೆ: ಪ್ರಸನ್ನ ರೇವನ್

Tonight - Tonight at night

Tonight you listen to the story of my heart,
Tomorrow you will forget me like a story.
I can't hold you in my arms,
Oh moon, with whom do you hold hands?
What is in your soul that with the first sip,
You make both the sober and the drunken drunkards drunk.
Wine is boiling in my heart, come and see,
If you remember from the blood of Siyavush.
If you listen, I will tell you a kind word,
Better than the jewel that you put in your ear.
The cup of the world is full of the blood of lovers' hearts,
Keep your respect, if you drink.
Shadow, like a candle, you spread a flame to the crowd,
From these stories that you tell with silent lips.
-Hushang Ebtehaj

Thursday, June 22, 2023

ಯೂಸ್ಲೆಸ್ ಕವಿತೆ

ಬೆಟ್ಟದಲ್ಲಿ ಕಳೆದು ಹೋದ 
ಕೆಂಪು ಹೂವ ಘಮಲು 
ಕೈಜಾರಿ ಠಳ್ಳನೆ ಬಿದ್ದ  
ಕಡುವೈನಿನ ಚಿತ್ತಾರದ ಅಮಲು 

ಚಂದ್ರ ಕಳೆದ ಬತ್ತಲೆ ರಾತ್ರಿ
ಸುರಿಸಿದ ಉಲ್ಕೆಗಳ ಬಣ್ಣ ಸಾವಿರ
ತಂಗಾಳಿಗೆ ಮೈಯ್ಯೊಡ್ಡಿದ 
ಕಂಗಳ ಹಸಿವಿನ ಕಾತರ 

ಸಾಯುತ್ತಲೇ ಉರಿಯುತ್ತಿದೆ
ತಿಳಿಹಳದಿಯ ಮುಂಬತ್ತಿ 
ಕುಣಿ ಕುಣಿಯುತ್ತಿದೆ 
ಹೂದಾನಿಯ ನೆರಳು ಕೈಯ್ಯೆತ್ತಿ 

ಕತ್ತಲ ದಿಟ್ಟಿಸುತ್ತಲೆ ಕಾಣುವ
ಕನಸುಗಳಲ್ಲೆಷ್ಟು ವ್ಯರ್ಥ? 
ಪರದೆಯ ಮೇಲೆ ಮೂಡಿ ಮಡಿಯುವ 
ಈ ನುಡಿಗಳಿಗಿದೆಯೆ ಅರ್ಥ? 

ಪ್ರಸನ್ನ 




Wednesday, November 23, 2022

ಅಮೇರಿಕೆ

ಅಮೆರಿಕೆ 

ತುತ್ತಿಕ್ಕಿ ಉಣಿಸುತ್ತಲೇ ಕಹಿರೊಟ್ಟಿಯ
ಗಂಟಲಿಗೆ ನೆಟ್ಟಳು ತನ್ನ ಹುಲಿ ದವಡೆಯ
ಹೀರುತ್ತಲೇ ನನ್ನ ಜೀವದ ಉಸಿರ, ಆದರೂ ಕೇಳಿ 
ಪ್ರೇಮಿಸುವೆ ನನ್ನ ಹರೆಯ ಪರೀಕ್ಷಿಸಿದ ಈ ಸುಂದರ ನರಕವ
ನನ್ನ ಬಿಸಿರಕ್ತಕೆ ಹರಿವಾಗಿ ನುಗ್ಗಿದೆ ಅವಳದೇ ಕಸುವು
ಅವಳ ಮೇಲಿನ ನನ್ನ ಹಗೆತನಕ್ಕೆ ಅದೇ ಬಲವು  
ಮತ್ತೆ ಮತ್ತೆ ಸೊಕ್ಕಿದ ಹೊಳೆಯಂತೆ ನುಂಗುವಳು ನನ್ನತನವ
ಆದರೂ, ರಾಜನ ಕಾಲಡಿ ನಿಂತ ಕ್ರಾಂತಿಕಾರಿಯ ರೀತಿ 
ನಿಲ್ಲುವೆ ಅವಳ ಗೋಡೆಗಳ ನಡುವೆ ಕೊಂಚವೂ ಇಲ್ಲದೆ ಭೀತಿ,
ಅಂಜಿಕೆ, ದುಃಖ, ಪಿಸುಮಾತಿನ ಅಳುಕು
ಎದುರಿನ ದಿನಗಳ ನೋಟದಲಿ ಇಲ್ಲವೇ ಇಲ್ಲ ಬೆಳಕು
ಕಂಡಷ್ಟೂ ಅವಳದೇ ಬಲ, ಮಹಾ ಪರ್ವತದ ಬೆರಗು
ಅವಿತಿದೆ ಎಲ್ಲವೂ ಕಾಲನ ಗುರಿತಪ್ಪದ ಕೈ ಬೀಸಿನ ಕೆಳಗೆ
ಮುಳುಗುವಂತೆ ಸಿರಿಹೊನ್ನು ಉಸುಕಿನ ಒಳಗೆ.

ಕ್ಲಾಡ್ ಮೆಕೆ

ಕನ್ನಡಕ್ಕೆ: ಪ್ರಸನ್ನ 


America
BY CLAUDE MCKAY

Although she feeds me bread of bitterness,
And sinks into my throat her tiger’s tooth,
Stealing my breath of life, I will confess
I love this cultured hell that tests my youth.
Her vigor flows like tides into my blood,
Giving me strength erect against her hate,
Her bigness sweeps my being like a flood.
Yet, as a rebel fronts a king in state,
I stand within her walls with not a shred
Of terror, malice, not a word of jeer.
Darkly I gaze into the days ahead,
And see her might and granite wonders there,
Beneath the touch of Time’s unerring hand,
Like priceless treasures sinking in the sand.

Tuesday, March 22, 2022

ಒಲವು ಮತ್ತು ಕಾಲ

ತಟಕ್ಕನೆ ಬಿದ್ದ ಸಣ್ಣ ಮಳೆಹನಿಯೊಂದು ಹಸಿರೆಲೆಯ ನಡುವೆ ಗೆರೆಯಾಗಿ ಹರಿದು

ಬೆಟ್ಟದ ಹಣೆಯ ಮೇಲೆ ಒತ್ತಿನಿಂತ ಮರಗಳ
ನಡುವೆ ಹಸಿ ಮೋಡಗಳು ಜಾರಿ ಮರದ ರೆಂಬೆಯನ್ನು ಅಪ್ಪಿದರೂ ತಳಕೊಂಬೆಗೆ
ಹುದುವಿನೊಳಗೆ ಸೀತಾಳೆಬಳ್ಳಿಯ ಬೇರಿನ ಮುತ್ತು
ಮುಟ್ಟಲಾಗದ ಬೈಗುಗೆಂಪಿನಲ್ಲಿ ಅಡಗಿರುವ
ಬಣ್ಣಗಳ ಓಕುಳಿ ಚೆಲ್ಲಿದ ಎದೆ ಗೂಡು
ಮರಳ ಕಣಕ್ಕೆ ದಿನವೂ ಮುತ್ತಿಟ್ಟು
ಮುತ್ತಾಗಿಸುವ ಚಿಪ್ಪಿನೊಳಗಿನ ಜೀವದ ಕನಸು
ಬೆಳಕಿನ ನಿರೀಕ್ಷೆಯಿಂದ ನೆಲದಡಿಯ
ಕತ್ತಲಿನಲ್ಲಿ ಮೊಳೆಯುವ ಬೀಜದ ಕಾತರ
ಎಂದೋ ಹುಟ್ಟುವ ಮಗುವಿಗಾಗಿ
ಹಂಬಲಿಸುವ ತಾಯ ಮೊಲೆಗಳು
ಕಾಲವನ್ನು ಮೆಟ್ಟಿ ನಿಲ್ಲಲು ಒಲವಿಗಲ್ಲದೇ
ಮತ್ಯಾರಿಗೆ ಸಾಧ್ಯ?
- ಪ್ರಸನ್ನ ರೇವನ್


Friday, April 23, 2021

ಎದೆ ಮೋಡಗಳ ಗುಡುಗು

ಎದೆ ಮೋಡಗಳ ಗುಡುಗು 

ಭುವಿಯೆದೆಯಲಿ ಇನ ಜಾರಿದ 

ದಿಕ್ಕಂಚಿನಲಿ ಚದುರಾಡಿದೆ ಮಿಂಚು,

ಉತ್ಕಟತೆಯ ಬಿಸು ಬಿರುಗಾಳಿಗೆ 

ನುಸುಳಾಡುವ ತೋಳುಗಳ ಸಂಚು!

ಮೆತ್ತನೆಯ ಹಿಮದೊದಿಕೆಯಲಿ 

ಹರಿದಾಡಿದೆ ತಿದಿಯುಸಿರಿನ ಮೊರೆತ, 

ಧರಧುರದ ಬರಸಿಡಿಲಿನ ಉರಿಜ್ವಾಲೆಯಲಿ

ನುಸುಳಾಡುವ ಫಣಿಮಂಡಲದ ಹೊಸೆತ!

ಸುಳಿದಾಡುವ ಮುಂಗುರುಳಿನ ಹಂದರದಿ 

ಬೆಸೆದೆದೆಗಳ ಬಿಸಿಯುಸಿರಿನ ಕಾದಾಟ

ಹಸಿದೊಲವಿನ ಉನ್ಮಾದಕೆ 

ಆಲಿಂಗನದ ಮಾಟ! 

ಎದೆಯೊಳಗಿನ ಉರಿಬಿಸಿಲಿಗೆ 

ಬಿಸಿ ಬೆಸುಗೆಯೇ ತಂಪು 

ಸುರಿಸುರಿಯುವ ಹಿಮದೊಳಗೆ

ಬೆವರಿನ ಹೊಳೆ ಕಂಪು!

- ಪ್ರಸನ್ನ 

Tuesday, May 12, 2020

ಅಮ್ಮ


ಅಮ್ಮ...

ಸಂಭವಿಸಿದೆ ಕಡುಹಳದಿಯ 
ಆಗಸದಲಿ ರವಿಯುದಿಸಿದದಂತೆ
ಆ ಕೊನೆಮುಟ್ಟದ ಆಗಸ 
ನೀನಲ್ಲವೇನು? 

ತಿರುತಿರುಗಿ ನಿಂತೆ ನೀಲಿಕಡಲ
ದೂರ ತೀರವ ತಲುಪಿದ ಚಿಪ್ಪಿನಂತೆ
ಪಾರಾವಾರವ ಬಳಸಿದ ದಡ 
ನೀನಲ್ಲವೇನು? 

ಜಯಿಸಿ ಬಂದೆ ಕರಿ ಮತಂಗದೆತ್ತರದ
ಪುಸ್ತಕವನುಂಡ ಸಾರಸ್ವತನಂತೆ 
ಎಡವಿದೊಡೆ ಮಸ್ತಕದಿ ಹೊಳೆವ ಪದ 
ನೀನಲ್ಲವೇನು? 

ಅಪ್ಪನೆನೆಸಿಕೊಂಡೆ ಕೆಂಗೆನ್ನೆಯ
ಮುಗುದೆಯರ ಸವಿಮಾತಿನಂತೆ 
ಆ ಎಳೆಪಾದಗಳು ನನ್ನೆದೆಯಲಿ ಮೂಡಿಸಿದ ಅಚ್ಚು 
ನೀನಲ್ಲವೇನು? 

ಯಾರೂ ಹೇಳಿಕೊಡದ ಮೊದಲ ಪದ
ಕೊನೆಯುಸಿರವರೆಗೂ ಮರೆಯದ ಪದ್ಯ 
ನೀನಲ್ಲವೇನು? 

- ಪ್ರಸನ್ನ 

Tuesday, February 04, 2020

ಎದುರಿಗೆ ಕಂಡವಳ ಕವಿತೆ

ಎದುರಿಗೆ ಕಂಡವಳ ಕವಿತೆ

ಪೇಲವ ಮೋಡಗಳ ಅಂಚಿಂದ ಜಾರಿದ
ಬೆಚ್ಚನೆ ನೆಲದ ಮಡಿಲನ್ನು ಕನಸಿದ
ಆ ಹಿಮದ ಹನಿ ಕೊನೆಗೂ ಮುತ್ತಿಟ್ಟಿತು
ಅವಳ ಕಂಗಳ ತುದಿಯ ಕಾಡಿಗೆ ತಟ್ಟನೆ ತೊಟ್ಟಿಕ್ಕಿತು

ರೆಪ್ಪೆಗಳ ನಿಧಾನದ ಅಪ್ಪುಗೆಯಲ್ಲಿ
ಹಿಂಡುವುದು ಯಾತನೆ ಕಣ್ಣಲ್ಲಿ
ಇಳಿಯುತ್ತಿದ್ದ ಸೂರ್ಯ ದಿಗಂತದೊಳಗೆ
ಜಾರುತ್ತಿತ್ತು ಕೆಂಡದ ಕಡ್ಡಿ ಬೆರಳೆಡೆಗೆ

ಕಾರಣವಿಲ್ಲದೆ ಏರುವ ಎದೆಬಡಿತ
ಕಾಣದ ಹಾದಿಗಳ ಹುಡುಕುವ ತುಡಿತ
ಪ್ರೇಮ ಮರೆತ ಮುಖದಲ್ಲಿ
ಭಾವನೆಗಳ ಹೊಯ್ದಾಟ? 


ಮೂಡದ ಚಿತ್ರವ ಅಡಗಿಸಿಕೊಂಡು
ಗಹಗಹಿಸಿ ಕೆರಳಿಸುವ ಹಾಳೆ,
ಕಾಲದ ಕಣ್ಣ ತಪ್ಪಿಸಿದ ಪ್ರೀತಿಯ ಆಳ,
ತೀರದ ಬಯಕೆಗಳ ಚಾದರದ ಕಪ್ಪಿನಲಿ
ಕನಸಿನ ಬಣ್ಣಗಳ ಬೆಳಕಿನಾಟ
ಇದು ಎದುರಿಗೆ ಕಂಡವಳ ಕವಿತೆ
ಅವಳು ಮತ್ತೆ ಕಾಣದಿರಲಿ

ಪ್ರಸನ್ನ

Friday, May 24, 2019

ಒಂದು ಮಧ್ಯಾಹ್ನ





ಎದೆಯ ಹಾಸಿಗೆಗೆ ಒರಗಿ
ಉಸಿರಿನ ಏರಿಳಿತಗಳಲ್ಲಿ ತಾನಾಗಿ
ಗುಂಡಿಗೆಯ ನಾದದಲ್ಲಿ ಒಂದಾಗಿ
ಅಪ್ಪಿ ಜಾರಿದಳು ಸ್ವಪ್ನಲೋಕದಲಿ

ಕನಲುವಳು ಕನಸಿನ ಮೆಲುಕಿಗೆ,
ಮತ್ತೆ ಮತ್ತೆ ಬಿಗಿಯುವ ಅಪ್ಪುಗೆಗೆ,
ಏನು ಹೇಳಲಿ ಕಡುಗಪ್ಪಿನ
ನಿದ್ದೆಯಲ್ಲೂ ಮಿಂಚುವ ನಗುವಿಗೆ?

ಕಪ್ಪು ಕೂದಲ ಇರುಳಿನಲಿ
ಮಿನುಗುವಳು ತನ್ನಾಕಾಶದಲಿ
ಹೊಳೆವ ರೆಪ್ಪೆಗಳಾಡಿಸುತ
ನಿಟ್ಟನೆ ಸುಯ್ಯುವಳು ಬಿಸಿಯುಸಿರ ತಾಳದಲಿ

ದೂರವಿರುವ ನನ್ನಮ್ಮನ ಒಲುಮೆಯ
ಮಡಿಲಿನಲ್ಲಿ ಒರಗಿಹುದು ನನ್ನ ಮನ
ಅವಳ ಉಸಿರಿಗೆ ತಾಳವಾಗಿ ನನ್ನುಸಿರು,
ದೇಶಕಾಲಗಳ ದಾಟಿ ಮಿಡಿಯುವ ಕರುಳಬಳ್ಳಿ

ನನ್ನ ಮಡಿಲಿಗೆ ಒರಗಿರುವ ಇವಳೂ ನನ್ನಮ್ಮನಲ್ಲವೇ?
ತಾಯಲ್ಲದ ಹೆಣ್ಣಿಲ್ಲದಂತೆ ಹೆಣ್ಣೆಲ್ಲವೂ ಹೊನ್ನಲ್ಲವೇ?

-ಪ್ರಸನ್ನ



Monday, January 14, 2019

ನನಗೇನು ಬೇಕು?


ನನಗೇನು ಬೇಕು?

ನನಗೆ ಬೇಕು, ಬಿರು ಬೇಸಗೆ ಸಂಜೆಗಳ ತಂಪುಗಾಳಿ
ಅಟ್ಟದ ಮೇಲಿಟ್ಟ ಬಾಳೆಗೊನೆಗಳ, ಬೆಲ್ಲದ ಅಚ್ಚುಗಳ ಕಮಟು ನಾತ
ಕಾಡು ಹಾದಿಯ ಚಿಕ್ಕ ಜಲಪಾತದ ಸಣ್ಣ ಮೊರೆತ
ಕಣ್ಣ ಮುಂದೆ ಗಕ್ಕನೆ ಸುಳಿವ ಕೆಂಪು ಏರೋಪ್ಲೇನ್ ಚಿಟ್ಟೆ

ಮಳೆನಿಂತರೂ ನಿಲ್ಲದ ಹಂಚಿನ ತುದಿಯ ಹನಿಗಳು
ಮುಗಿಲೆತ್ತರಕೆ ಹಬ್ಬಿದ ಮರದಡಿಯ ಪುಟ್ಟ ಆಡಿನಮರಿಯ ಕೇಕೆ
ಚಳಿಗಾಲದ ಕತ್ತಲಿನ ಸಂಜೆಗಳ ಬೆಚ್ಚಗಿನ ಗಂಜಿ, ಹುರಿದ ಮೀನು
ಬಾವಿಯೊಳಗಿನ ಮರಿ ಆಮೆಯ ದಿಟ್ಟ ನೋಟ

ಉಜ್ವಲ ವರ್ಣಗಳ ಹಕ್ಕಿಗಳ ಸುಳಿದಾಟ, ಮರೆದಲೆಗಳ ಹೊಯ್ದಾಟ
ವ್ಯೋಮದಾಚೆಯ ನಕ್ಷತ್ರ ಪುಂಜಗಳ ದಿಟ್ಟಿಸುವ ಸರಿರಾತ್ರಿಯ ಮೌನ
ಪ್ರೀತಿಸುವವರ ಸಾನಿಧ್ಯ, ಕಣ್ಣುಮುಚ್ಚಿ ಅತ್ತುಬಿಡುವ ಗೆಳೆತನ
ಭೂಮಿಯನ್ನು ಸೀಳಿ ಎದ್ದುನಿಲ್ಲುವ ಚಿಗುರಿನ ಪಾಠ

ನನಗೆ ಯಾವಾಗಲೂ ಬೇಕು ಈ ಪುಟ್ಟ ಬೇಕುಗಳನ್ನು
ಕನಸಿಸುವ ಮುಗ್ಧತೆ, ಸ್ವಲ್ಪ ದಡ್ಡತನ ಮತ್ತು ಬಹಳ ಹಸಿವು

-ಪ್ರಸನ್ನ ರೇವನ್



Wednesday, September 05, 2018

ಶ್ಲೋಕತ್ವ ಮಾಗತಃ

ನಟ್ಟಿರುಳಿನ ಕಗ್ಗತ್ತಲ
ನೀರವ ಮೌನದ ಗೆಳೆತನ,
ನನ್ನತನದ ನೋವು ನನ್ನೊಳಗೆ
ಮಿಣುಕುವ ಪುಟ್ಟ ದೀಪ

ನೆರಳ ಕೈ ಹಿಡಿದು ನೆಡೆದು
ಎಡವಿ ನೆರಳಾಗಿ ಬಿಡುವ ಹಂಬಲ,
ಮಳೆನಿಂತು ಹೊತ್ತಾದರೂ
ತೊಟ್ಟಿಕ್ಕುವ ಹೆಂಚಿನ ತುದಿ

ನಾನೇನೇ ಆದರೂ ನಾನಾಗದ
ಅದೆಷ್ಟು ಅನುಭವಗಳು?
ಸುತ್ತಲಿನ ಪ್ರಪಂಚದ ತುಂಬ
ಮುಗಿಯದ ಹಾಡುಗಳೆಷ್ಟು?

ಬದಲಾಗುವ ಬೆಳಕಿನ
ಜಗತ್ತಿನಲ್ಲಿ ಬದಲಾಗುತ್ತಲೇ
ಬೆತ್ತಲಾಗುವ ಮೈಮನಗಳ,
ಒಳಸುಳಿಗಳ ಅಮಾಯಕತೆ
ನನ್ನ ನಿಜವಾದ ಆಸ್ತಿ, ಅಥವಾ ಅಸ್ತಿ...

-ಪ್ರಸನ್ನ