ನಾನೊಂದು ಮರ
ಯಾವದೋ ಬೆಳ್ಮೋಡ
ಝಳಕಿಸಿದ
ಹನಿಗಳು ಇನ್ನು ಯಾವಾಗಲೋ
ಹಸಿರೆಲೆಗಳಾಗಿ
ಮೊಗ್ಗಾಗಿ ಹೂವಾಗಿ
ಜೇನಾಗಿ
ಕಾಯಾಗಿ ಹಣ್ಣಾಗಿ
ನನ್ನ ಮೈತುಂಬ
ಬಣ್ಣಗಟ್ಟುತ್ತವೆ.
ಸಂಜೆ ಕೆಂಪಿನ
ನೂರಾರು ಸೂರ್ಯರಂತೆ!
ಮಲಿನ ಗಂಗೆಯೂ
ಎನ್ನುದರ ಸೇರಿ
ಪಾವನ ಪುಷ್ಪವಾಗುತ್ತಾಳೆ
ಪುಟ್ಟ ಅಳಿಲುಗಳು
ಅಳಿಯದೇ ಉಳಿದು
ನನಗೆ ಕಚಗುಳಿಯಿಟ್ಟು
ನಕ್ಕಾಗ
ನನ್ನಡಿಯಲಿ ಕೊನೆಯುಸಿರೆಳೆದ
ಬುದ್ಧ ನನ್ನ ಕೊಂಬೆಯ ಮೇಲೆ
ಬಕವಾಗಿ ಧ್ಯಾನಿಸುತ್ತಾನೆ
ಕಾಲಿನ ಕೆಳಗೆ ತಣ್ಣಗೆಹರಿಯುತ್ತಿದ್ದಾಳೆ ನೀಲಗಂಗೆ ಕಣ್ಣಮುಂದೆ ನೂರು ಮೈಲಿಗಳ ಕಪ್ಪು ಮೋಡ ಕೋರೈಸುತ್ತಿವೆ ಆಗಾಗ ಕಾಣುವ ಬೆಳ್ಳಕ್ಕಿ ಚುಕ್ಕಿ ಕೊಳದ ಮಧ್ಯೆ ಗುಂಪಾಗಿ ಅಪ್ಪಿಕೊಂಡಿವೆ ಹಸಿರು ಕಮಲಗಳು ಪವನನ ಸುಯ್ದಾಟ, ಹರಿದಾಟ, ತುಂಟಾಟಗಳಿಗೆ ನಾಚಿ! ಅಲ್ಲೆಲ್ಲೋ ಭೂಮಿಯಪ್ಪಿ ತಬ್ಬಿವೆ ವರುಣನ ವರ್ಷಭಾಹು! ಬೀಸುತ್ತಿದೆ ಸಂವತ್ಸರದ ಅತ್ಯಂತ ತಣ್ಣನೆಯ ಗಾಳಿ!
ನನ್ನ ಮನಸ್ಸೂ ತಬ್ಬಿದೆ ಬೆಚ್ಚನೆಯನೆನಪುಗಳನು ಕಟ್ಟುತ್ತಿದೆ ಕಲ್ಪನೆಯ ಅಂಗಳದಲ್ಲೊಂದು ನಾಟ್ಯಶಾಲೆಯನ್ನು! ಚಿತ್ರಿಸುತ್ತಿದೆ ಹೇಗೇಗೋ ಇರಬಹುದಾದ ಭವಿಷ್ಯದ ನೆನಪುಗಳನ್ನು!