Tuesday, August 12, 2014

ಚಿತ್ರ

ಚಿತ್ರ

ಸುತ್ತಲಿನ ಭೂಮ ಜಗತ್ತಿನ ಬೆಳಕು
ಕಣ್ಣಿನ ಓರೆಕೋರೆಯ
ಕೊರಕಲುಗಳನ್ನು ದಾಟಿ
ಹೃದಯದ ಆಳಕ್ಕಿಳಿದು ಭಾವನೆ,
ಅನುಭವಗಳನ್ನು ಕಟ್ಟಿಕೊಂಡು
ಕಾಲನ ನಿಮಿಷಗಳಲ್ಲಿ ಸೋಸಿ, ಸೋಸಿ
ಹಸ್ತದಲ್ಲಿ ಜಾರಿ, ಬೆರಳುಗಳನ್ನು ಮುತ್ತಿಕ್ಕಿ
ಹಾಳೆಯ ಮೇಲೆ ಹರಿದಾಡಿದಾಗ
ಮೂಡುತ್ತದೆ. ಚಿತ್ರ

ಕ್ಷಣವನ್ನು ಸಾವಿರ ತುಂಡುಮಾಡುವ
ಯಂತ್ರದಂತಲ್ಲ ಅದು...

ಅದು ಮಾನುಷ ಚಿತ್ರ, ಸಾವಿರ ಕ್ಷಣಗಳನ್ನು
ಜೋಡಿಸುತ್ತದೆ, ಭವದ ಬಾಯಾರಿಕೆಗಳನ್ನು
ತಣಿಸುತ್ತದೆ.

- ಪ್ರಸನ್ನ ರೇವನ್

Sunday, April 06, 2014

ಯಾವ ಕವಿತೆ?

ಯಾವ ಕವಿತೆಯು ನಿನ್ನ
ಹೃದಯವನು ಹೊಕ್ಕಿಹುದು?

ಹನಿಗಣ್ಣ ಹಿಂದಿರುವ
ಆರ್ದ್ರ ಮನಸಿನ ಒಳಗೆ
ಬಣ್ಣ ಬಳಿದು ಓಕಳಿಯಾಡಿ
ಮೌನದಂಗಳದಿ ಕುಪ್ಪಳಿಸಿ

ಸದ್ದಿರದ, ನುಡಿಯಿರದ
ಹಾಡೊಂದನು ಉಳಿಸಿ,
ನಗಿಸಿ, ಅಳಿಸಿ, ಮರೆಸಿ
ಕನಸಿನ ಹಸಿರುಮರಗಳ
ನಡುವೆ ಮುತ್ತಿಡುವುದು?

ಯಾವ ಕವಿತೆ ನಿನ್ನ
ಹೃದಯವನು ಹೊಕ್ಕಿಹುದು?

-ಪ್ರಸನ್ನ ರೇವನ್


Sunday, October 13, 2013

ಒಳದನಿ


ಪರಿಚಯ ಪತ್ರದಲ್ಲಿ ಸುಂದರವಾಗಿ
ಕಾಣುವ ಬದುಕಿನ ಆರ್ದ್ರತೆ
ಮನಸ್ಸಿನಂತರಾಳದಲ್ಲಿ
ವಿಹ್ವಲತೆಯ ಕೂಗನ್ನೆಬ್ಬಿಸಿ ಕನಲುತ್ತದೆ
ಮಳೆಗಾಲದಲ್ಲೂ ಮಾಲೀಕನ
ಮರ್ಜಿಗಾಗಿ ಕಾಯುವ
ಕಿಟಕಿಯ ಹಿಂದಿನ ಗುಲಾಬಿ ಗಿಡದಂತೆ!

Thursday, January 24, 2013

ತಿರುವುಗಳು

ನಿನ್ನ ನೆನಪಿನ ಹಾಯಿ ದೋಣಿಯ ಮೇಲೆ
ನಾಲ್ಕು ತೇವದ ಇಂಕಿನ ಗೆರೆಗಳನ್ನು ಗೀಚ ಹೋದಾಗ
ಥಟ್ಟನೆ ಎಗರಿದ ಅನಿರೀಕ್ಷಿತ ಕಾಲನ ತಿರುವು
ಎಲ್ಲವನ್ನೂ ಅಳಿಸಿ ಹಾಕಿತು

Wednesday, December 19, 2012

ಝಲಕ

ನಿನ್ನ ನೆನಪುಗಳ ಹೆಜ್ಜೆ ಸಪ್ಪಳ
ನನ್ನ ನೀರವ ಏಕಾಂತದ ರಾತ್ರಿಗಳನ್ನು
ಝಲಕಿಸಿಬಿಡುತ್ತವೆ.

ನೆಲದಾಳದಲ್ಲಿ ಅಡಗಿದ ಪುಟ್ಟ
ಹೂವು, ಸುತ್ತಲೂ ಹಬ್ಬಿದ
ಹುಲ್ಲಿನ ದಟ್ಟತೆಯ ನಡುವೆ 
ಹರಡಿ ನಿಂತು ಬಿಡುತ್ತದೆ. 

ಹಳೆಯ ಗೋಡೆಯ ಮೇಲಿನ
ಸಿನಿಮಾ ಪೋಸ್ಟರಿನ ಚೂರು
ಹಳೆಯ ಕತೆಯೊಂದನ್ನ 
ತೋರುತ್ತದೆ. 

ವಿಶಾಲ ಆಕಾಶದಲ್ಲೊಂದು
ಹದ್ದು ವಿಹರಿಸುತ್ತಿದೆ.

ಕನಸುಗಳ  ಬೀಜವಲ್ಲದೇ
ಮತ್ತೇನದು?

-ಪ್ರಸನ್ನ ರೇವನ್


Monday, October 01, 2012

ಮರದ ಹಾಡು

ಮರದ ಹಾಡು

ನಾನೊಂದು ಮರ
ಯಾವದೋ ಬೆಳ್ಮೋಡ
ಝಳಕಿಸಿದ
ಹನಿಗಳು ಇನ್ನು ಯಾವಾಗಲೋ
ಹಸಿರೆಲೆಗಳಾಗಿ
ಮೊಗ್ಗಾಗಿ ಹೂವಾಗಿ
ಜೇನಾಗಿ
ಕಾಯಾಗಿ ಹಣ್ಣಾಗಿ
ನನ್ನ ಮೈತುಂಬ
ಬಣ್ಣಗಟ್ಟುತ್ತವೆ.
ಸಂಜೆ ಕೆಂಪಿನ
ನೂರಾರು ಸೂರ್ಯರಂತೆ!

ಮಲಿನ ಗಂಗೆಯೂ
ಎನ್ನುದರ ಸೇರಿ
ಪಾವನ ಪುಷ್ಪವಾಗುತ್ತಾಳೆ
ಪುಟ್ಟ ಅಳಿಲುಗಳು
ಅಳಿಯದೇ ಉಳಿದು
ನನಗೆ ಕಚಗುಳಿಯಿಟ್ಟು
ನಕ್ಕಾಗ
ನನ್ನಡಿಯಲಿ ಕೊನೆಯುಸಿರೆಳೆದ
ಬುದ್ಧ ನನ್ನ ಕೊಂಬೆಯ ಮೇಲೆ
ಬಕವಾಗಿ ಧ್ಯಾನಿಸುತ್ತಾನೆ

ಅಷ್ಟರ ಮಟ್ಟಿಗೆ ನಾನು ಧನ್ಯ

-ಪ್ರಸನ್ನ ರೇವನ್

Wednesday, July 11, 2012

ಸಾವಿರಾರು ಮುತ್ತಿನಂತೆ

ಅಂದು ಸಂಜೆ ಗುಡುಗಿನ ಮಳೆಯ
ನಡುವೆ ಉದುರಿದ ನಿನ್ನ 
ಕಣ್ಣ ಹನಿಗಳು, ಪ್ರತಿ ಮಳೆಗಾಲದಲ್ಲಿ 
ಸಾವಿರಾರು ಮುತ್ತಿನಂತೆ 
ನನ್ನ ಮೇಲೆ ಸುರಿಯುತ್ತವೆ.

ನನ್ನ ನಿನ್ನ ದ್ವೈತದ ನಡುವೆ
ಅಲೆದಾಡುವ ಗಾಳಿಯಂತೆ 
ಸುಗಂಧಗಳ ಸಂಗ್ರಾಮದಂತೆ
ತಣ್ಣನೆ ತಿರುಗಾಡುವ ನಿನ್ನ ಸೆರಗಿನಂತೆ 
ಅದ್ವೈತವಾಗಿ...
ಹರಿದಾಡುತ್ತಿವೆ ನಿನ್ನ ನೆನಪು.

-ಪ್ರಸನ್ನ 

Saturday, November 19, 2011

ಬರೆಯಲಾಗದ ಕವಿತೆಗಳು

ಬರೆಯಲಾಗದ ಕವಿತೆ
ಕದ್ದು ನೋಡಿದ ಕನಸು
ಬಿದ್ದರೂ ಬದಲಾಗದ ರೂಪ
ಎದ್ದೆದ್ದು ಓಡುತ್ತಿರುವ ಬದುಕು

ಯಂತ್ರಗಳ ಸ್ನಿಗ್ಧತೆಯಲ್ಲಿ
ದೂರ ದೂರ ಸೂರ್ಯನ ಬೆಳಕು
ಕನ್ನಡಿಯೊಳಗಿನ ಮಾಯೆಯ ಥಳಕು
ಭದ್ರವಾಗಿದ್ದೂ ಬಳುಕುವ ಬದುಕು

ನಿರಂತರ ಬೀಸುವ ಬೆಳಕಿನ ಗಾಳಿ
ಸುಯ್ಯನೆ ಹುಯ್ದು ಬೆಚ್ಚಗಾಗಿಸುವ ಮಳೆ
ಅಚ್ಚ ಹಸುರಿನ ಕನಸುಗಳ ಮಧ್ಯೆ
ಹಣ್ಣು ಹಣ್ಣು ಮನಸು!

-ಪ್ರಸನ್ನ ರೇವಣ್ಣ

Monday, July 11, 2011

ಗೇಯ ಗೀತೆ

ಅಣು, ವಿಸ್ತಾರಗಳನ್ನೆಲ್ಲ ಕಳಚಿ ಸಿಡಿದು
ಭೂಮಿ, ಭೂಮಗಳನ್ನೆಲ್ಲ ಮಿಕ್ಕಿ ಮೊರೆದು 
ಅಂತರಾಳದಲ್ಲಿ ಕುಗ್ಗಿ ಬಸವಳಿದ ಭಾವನೆಗಳನ್ನೆಲ್ಲ ನಭಕ್ಕೆಸೆದು
ಚಿಮ್ಮಿ, ನುಗ್ಗಿ, ಹರಿದು, ಹರಿಯುತ್ತೇನೆ
ಸ್ವಾತಂತ್ರದ ಬೆಳುಮುಗಿಲಿನೆಡೆಗೆ,
ಸ್ವಚ್ಚಂದ ಪರಿಸರದಲ್ಲಿ ಕರಗಿ,
ಬೆಳಕಿನಲಿ ಬೆಳಕಾಗಿ, ಕತ್ತಲೆಯಲ್ಲಿ ಕತ್ತಲಾಗಿ
ನನ್ನೊಳಗೊಂದಾಗಿ ಬದುಕುತ್ತೇನೆ, ಬದುಕಿಸುತ್ತೇನೆ!

-ಪ್ರಸನ್ನ ರೇವನ್

Tuesday, May 03, 2011

ಮರಳಿನಲ್ಲಿ ಬಿದ್ದ ಮಳೆಹನಿಗಳು

ಕಳೆದು ಹೋಗುತ್ತವೆ ನಮ್ಮ ಕನಸು, 
ಕನವರಿಕೆ, ನೆನಪು ಮತ್ತು
ಅಂತರ್ಮುಖಿ ಸಂವಾದಗಳು
ಪ್ರತಿಮೆ, ಉಪಮೆ, ರೂಪಕಗಳಲ್ಲಿ

ಮರಳಿನಲ್ಲಿ ಬಿದ್ದ ಮಳೆಹನಿಗಳಂತೆ
ಸ್ವಪ್ನದಲಿ ಕೊಟ್ಟ ಮುತ್ತಿನಂತೆ
ಹೃದಯದ ದಟ್ಟ ತಿಮಿರದಲ್ಲಿ 
ಆಗಾಗ ಮೂಡುವ ರಾಗಗಳಂತೆ!

-ಪ್ರಸನ್ನ