Wednesday, April 05, 2017

ಮರ

ಹಸಿರೆಲೆಗಳ ನಡುವೆ ಹೊಳೆಯುತ್ತಿದ್ದ ಕೆಂಪು
ಹಣ್ಣಿನೆದೆಯಿಂದ ಹೊರಗೆಳೆದು
ತನ್ನ ಹೊಟ್ಟೆಯ ಬೆಚ್ಚನಿತ್ತು ಹಿಕ್ಕೆಯಾಗಿ
ಭೂಮಿಗಿತ್ತಿದ್ದು ಕಪ್ಪು ಕಾಜಾಣ

ಕಾರ್ಮೋಡಗಳ ಆರ್ಭಟಗಳ ನಡುವೆ
ಬೆನ್ನ ಮೇಲೊತ್ತು ಹರಿದು ಹರಡಿ
ಭೋರ್ಗರೆದು ಸುಳಿದಾಡಿ ಕೆಂಪು ಮಣ್ಣಿನ
ಅಪ್ಪುಗೆಗೆಯೊಪ್ಪಿಸಿದ್ದು ಕಪ್ಪು ನದಿ

ನೆಲದ ಕಸುವು, ಬೀಸುವ ತಂಬೆರಲಿನ
ತರು ಲತೆಗಳೊಡನಾಟದ ಟಿಸಿಲಾಟಗಳಿಗೆ
ಗೆಳೆಯರಾಗಿ ಬಂದು ಚಿಗುರ ಕಚ್ಚಿ ಹಿಗ್ಗಿ ಹರಡಿಸಿದವರು
ಕಪ್ಪು ಉಣ್ಣೆಯ ನಾಗಲಾಟದ ಮಿತ್ರರು!

ಹಿಗ್ಗಿ ಬೆಳೆದು ಮೇಘಗಳಿಗೆ ಮುತ್ತಿಕ್ಕಿ
ಸಂದು ಕೊರಕಲುಗಳಲ್ಲಿ ಮನೆಯನಿತ್ತು
ಕೋಟಿ ಮನಸುಗಳ ತಂದು ಮೈಮೇಲೆ
ಪುಟ್ಟ ಹೆಜ್ಜೆಯನಿಡಿಸಿದವರು
ಅಳಿಲು ಪಕ್ಷಿ ಕೀಟ ವಾನರ ಮೂಷಕರು!

ಕಿತ್ತು ಕತ್ತರಿಸಿ ಛೇದಿಸಿ ಉದುರಿಸಿ
ಬೀಳಿಸಿ ಬೇಧಿಸಿ ತಿಕ್ಕಿ ಗುದ್ದಿ ಹೊಡೆದು
ಹೇರಿ ಎಳೆಸಿ ಮುರಿದು ಕೊಳೆಸಿ
ಕೆಟ್ಟ ಮೂಲೆಗೆ ತಳ್ಳಿದವರು ಮಾನವರು

- ಪ್ರಸನ್ನ ರೇವನ್

Friday, August 05, 2016

'ಜಾನಿಸ್'

ಅದುರುವ ಕೈ ಒತ್ತಿ ಅದುಮಿ ಮೆಲ್ಲಗೆ 'ಕ್ರೈ ಬೇಬಿ' ಎಂದಳು
ಅವಳ ದನಿ ಸ್ವಲ್ಪ ದಪ್ಪ, ಕರ್ಕಶ ಎನಿಸಿದರೂ
ಅದರೊಳಗೆ ಕದಡಿದ ಹಸಿ ಅನುಭವಗಳ
ಮಾಧುರ್ಯದ ಇಂದ್ರಚಾಪದಿಂದ
ಎಂಥಾ ನೋವಾದರೂ ಪುನೀತ!
ಬದುಕಿನ ದಟ್ಟನೀಲಿ ದಿಗಂತದಲ್ಲಿ ಮಿಣುಕುವ
ಅವಳ ಟೇಲ್ ಲೈಟನ್ನು ಕನಸಿನಂತೆ ಹಿಂಬಾಲಿಸಿ
ನಿರ್ಜನ ತೀರದಲ್ಲಿ ಬಿಡಾರಹೂಡಿ
ನಕ್ಷತ್ರ ಹೊದ್ದು ಮಲಗಿ ಕಂಡಿದ್ದು
ಸಾವಿರ ಭಾವಗಳ ಸುದೀಪ್ತ ಜ್ವಾಲೆ!
ಲಕ್ಷ ಜನರ ನಡುವೆ ಹಾಡಿದರೂ ಏಕಾಂಗಿಯಾಗಿ
ಹೆಮ್ಮೆಯಿಂದ ನರಳಿದಳು
ಯಶದ, ಪ್ರೀತಿಯ ತೆಕ್ಕೆಯಿಂದ ಮೆಲ್ಲಗೆ ಜಾರುತ್ತಲೇ,
ಕಳೆದುಕೊಳ್ಳುವುದಕೇನು ಉಳಿಯದಿರುವುದೇ
ನಿರ್ಮುಕ್ತಿಯಲ್ಲವೇ ಎಂದು ನಕ್ಕವಳು
ಕೈಯಲ್ಲಿ ಕೈಹಿಡಿದು ಅಂತರಂಗದ ಅನಲವನ್ನು
ದಾಟಿಸುತ್ತಲೇ, ಕಡುಪ್ರೀತಿಯ ಕೆನ್ನಾಲಿಗೆಗಿರುವ
ಕನ್ನೈದಿಲೆಯಂತ ಮಾರ್ದವತೆಯ ದರ್ಶನ ಮಾಡಿಸುತ್ತಾ
ಲೋಕದ ನಿಯಮಗಳನ್ನು ಮುರಿದು ಮುಕ್ಕಿದ,
ನಿಯತಿಯನ್ನರಿಯದೆ ಪ್ರೇಮಜ್ವಾಲೆಯಲ್ಲೇ ಭಸ್ಮವಾದ
ಚೇತನ ನನ್ನ 'ಜೊಪ್ಲಿನ್'!
-ಪ್ರಸನ್ನ ರೇವನ್

ಹದಿಹರೆಯದವರು


ಭೋರ್ಗರೆವ ತೀರದ ಕಡೆಯಿಂದ 
ಬೀಸುವ ಬೆಚ್ಚಗಿನ ಗಾಳಿಗೆ ಮೆಲ್ಲನೆ ಜಾರುವ
ಮೈಗೆಲ್ಲಾ ಅಂಟಿದ ಪುಡಿಪುಡಿ ಮರಳು
ಇಲ್ಲೇ ಹಿಂದೊಂದು ತಿಳಿಗೊಳದೊಡಲಿನಲಿ
ಆಗಸಕೆ ಮುತ್ತಿಟ್ಟು ಮುಳುಗುವ ಮೀನು
ನೀಲಾಕಾಶದ ದಿಗಂತದಲ್ಲಿ ದಟ್ಟ ಕೆಂಪು!
ಉದ್ದ ಕಿನಾರೆಯ ದೂರದಲ್ಲಿ ಅಲ್ಲೆಲೋ
ಹರಡಿ ಬಿದ್ದ ಜೀನ್ಸು ಟಿ-ಶರ್ಟುಗಳು
ಅಮಲುಗಣ್ಣಿಗೆ ಕಾಣುವ ಪ್ರೇಮ, ದಾಹ, ತವಕ
ಎದೆಯೊಳಗೆ ಮಳ್ಳಗೆ ಕಾಯುವ ಪುಳಕ...
ನಾಗಮಂಡಲ ನೆನಪಿಸುವ ತೆಕ್ಕೆ
ಬಿಸಿಯುಸಿರು, ನೀರವ ಏಕಾಂತ
ಯಾರಿಗೂ ಹೆದರದ, ಕಾಯದ
ಕಾದ ಯೌವ್ವನ!

ನನ್ನ ನಿಮ್ಮೊಳಗಿನ ಕಲಾವಿದನಿಗೆ!


ಚಿತ್ರಬರೆಯಲು ಸಾಲದು 
ಬ್ರಷ್ಷು, ಹಾಳೆ, ಬಣ್ಣ, ಇತ್ಯಾದಿ
ನಿನ್ನ ಬಳಿಯಿದೆಯೇ ತಣ್ಣನೆಯ ಮನಸ್ಸು,
ಪುಟ್ಟ ಮೂಲೆ, ವಿಶಾಲ ಹೃದಯ?
ಬೆರಳುಗಳೇ ಕುಂಚ, ಆಕಾಶವೇ ಕ್ಯಾನ್ವಾಸ್!
ನಿನ್ನ ಮನಸ್ಸೇ ಗುರು, ಅದು ಬೇಡುವ ಸಂಬಳ
ನಿನ್ನ ದೈನಂದಿನದ ತಪಸ್ಸು
ಉಜ್ವಲ ಕನಸು ಮತ್ತು ಸ್ವಲ್ಪ ಬಿಂಕ!
ಮೀನುಮರಿಯಂತೆ ಪುಸಕ್ಕನೆ ಜಾರಿಬಿಡಬಹುದು
ನಿನ್ನ ಚಿತ್ರಸುಂದರಿ, ಎಚ್ಚರ...
ಗೀಚಿ ಬಂಧಿಸಿಬಿಡು ಮುಕ್ತಗೆರೆಗಳಲ್ಲಿ!
ಚೆಲ್ಲಿಬಿಡು, ಚಿಮ್ಮಿಬಿಡು
ಮನಸ್ಸಿನ ಬಣ್ಣಗಳನ್ನು ಎಲ್ಲೆಡೆಗೆ...
ಸುತ್ತಲೂ ಕಾಣುವುದೆಲ್ಲ ದೈವ ಕಲಾವಿದನಿಗೆ,
ನಿನ್ನ ದೃಷ್ಟಿ ಸೃಜಿಸುವುದೆಲ್ಲ ಕಲೆ
ಪರಿಧಿ, ವಿನ್ಯಾಸ, ಲಾಲಿತ್ಯ, ದರ್ಶನ,
ಕಾರಣ, ರೂಪಕದ ಗೋಜು ನೋಡುವವರಿಗೆ!
-ಪ್ರಸನ್ನ ರೇವನ್

Monday, October 12, 2015

ಕನಸುಗಳೇ

ಕನಸುಗಳೇ

ನಯನಗಳೊಳಗೆ ಅವಿತಿರುವ ಕನಸುಗಳೇ
ಹೃದಯದ ಕಂದರವನ್ನೊಡೆದು ಬನ್ನಿ
ಬನ್ನಿ ನನ್ನ ಸವ್ಯದ ಭವಿತವ್ಯಕೆ

ಸನ್ನಿಹಿತವೆನಿಸುವುವು ಎನ್ನ ಅಂತರಂಗದ
ಮಿದುವು, ಸೆಡವು, ಅಪರೋಕ್ಷ ರೂಕ್ಷತೆಗಳು
ವಿದ್ಯೆ, ಚೆಲುವು, ಪ್ರೀತಿ, ಇತ್ಯಾದಿ

ಕಾಲಕಾಲಗಳನ್ನು ಮೀರಿ, ಹೆಜ್ಜೆ,
ಗೆಜ್ಜೆಗಳನು ದಾಟಿ, ಎಡವಿ, ಎಗರಿ
ಕಮರಿ, ಕಲಕಲನೆ ಕಲೆತು, ಅಮರಿ

ಬನ್ನಿ ಸಾಕು ನನ್ನೆಡೆಗೆ, ನನ್ನೆದೆಗೆ
ಹನಿಯಾಗಿ, ಇಹವಾಗಿ, ನಿಜವಾಗಿ
ನನ್ನ ಇಹದ ಅನಿಮಿಷದ ಬದುಕಿಗೊಮ್ಮೆ ಬನ್ನಿ

-ಪ್ರಸನ್ನ ರೇವನ್

Tuesday, August 25, 2015

ಊರಿನ ಸುತ್ತ ಮುತ್ತ...

ಊರಿನ ಸುತ್ತ ಮುತ್ತ...

ಸಣ್ಣಗೆ ಬೀಸುವ ಗಾಳಿಯೊಳಗೆ
ಅಲ್ಲೊಂದು ಇಲ್ಲೊಂದು ಸಣ್ಣ ಹನಿ
ಹಸಿರು ಬಳಿದುಕೊಂಡ ಹೊಂಗೆ ಮರದ
ನೆರಳಿನಲ್ಲಿ ಸಣ್ಣಗೆ ನರಳುವ ಕವಿತೆಗಳು

ಬಿರು ಬೇಸಿಗೆಯ ಸಂಜೆ
ಅಮ್ಮ ರೊಟ್ಟಿಯಳಗಿಟ್ಟು ಕೊಟ್ಟ
ಕೆಂಪು ಹಿಂಡಿಯೊಳಗೆಷ್ಟು
ತಾಪ, ಸಿಹಿ, ಘಮಲು?
ತಂಪು, ಹಿತ, ಅಮಲು?

ಕಳ್ಳಿ ಬೇಲಿಯ ನಡುವೆ
ಬಟ್ಟಲುಗಣ್ಣಿನ ಮುಂಗುಲಿ
ಅಲ್ಲೇ ಮೇಲಿನ ಜಾಲಿಮರದ
ಎಲೆಯೆಲ್ಲ ಬಾವಲಿ!

-ಪ್ರಸನ್ನ ರೇವನ್


Tuesday, August 12, 2014

ಚಿತ್ರ

ಚಿತ್ರ

ಸುತ್ತಲಿನ ಭೂಮ ಜಗತ್ತಿನ ಬೆಳಕು
ಕಣ್ಣಿನ ಓರೆಕೋರೆಯ
ಕೊರಕಲುಗಳನ್ನು ದಾಟಿ
ಹೃದಯದ ಆಳಕ್ಕಿಳಿದು ಭಾವನೆ,
ಅನುಭವಗಳನ್ನು ಕಟ್ಟಿಕೊಂಡು
ಕಾಲನ ನಿಮಿಷಗಳಲ್ಲಿ ಸೋಸಿ, ಸೋಸಿ
ಹಸ್ತದಲ್ಲಿ ಜಾರಿ, ಬೆರಳುಗಳನ್ನು ಮುತ್ತಿಕ್ಕಿ
ಹಾಳೆಯ ಮೇಲೆ ಹರಿದಾಡಿದಾಗ
ಮೂಡುತ್ತದೆ. ಚಿತ್ರ

ಕ್ಷಣವನ್ನು ಸಾವಿರ ತುಂಡುಮಾಡುವ
ಯಂತ್ರದಂತಲ್ಲ ಅದು...

ಅದು ಮಾನುಷ ಚಿತ್ರ, ಸಾವಿರ ಕ್ಷಣಗಳನ್ನು
ಜೋಡಿಸುತ್ತದೆ, ಭವದ ಬಾಯಾರಿಕೆಗಳನ್ನು
ತಣಿಸುತ್ತದೆ.

- ಪ್ರಸನ್ನ ರೇವನ್

Sunday, April 06, 2014

ಯಾವ ಕವಿತೆ?

ಯಾವ ಕವಿತೆಯು ನಿನ್ನ
ಹೃದಯವನು ಹೊಕ್ಕಿಹುದು?

ಹನಿಗಣ್ಣ ಹಿಂದಿರುವ
ಆರ್ದ್ರ ಮನಸಿನ ಒಳಗೆ
ಬಣ್ಣ ಬಳಿದು ಓಕಳಿಯಾಡಿ
ಮೌನದಂಗಳದಿ ಕುಪ್ಪಳಿಸಿ

ಸದ್ದಿರದ, ನುಡಿಯಿರದ
ಹಾಡೊಂದನು ಉಳಿಸಿ,
ನಗಿಸಿ, ಅಳಿಸಿ, ಮರೆಸಿ
ಕನಸಿನ ಹಸಿರುಮರಗಳ
ನಡುವೆ ಮುತ್ತಿಡುವುದು?

ಯಾವ ಕವಿತೆ ನಿನ್ನ
ಹೃದಯವನು ಹೊಕ್ಕಿಹುದು?

-ಪ್ರಸನ್ನ ರೇವನ್


Sunday, October 13, 2013

ಒಳದನಿ


ಪರಿಚಯ ಪತ್ರದಲ್ಲಿ ಸುಂದರವಾಗಿ
ಕಾಣುವ ಬದುಕಿನ ಆರ್ದ್ರತೆ
ಮನಸ್ಸಿನಂತರಾಳದಲ್ಲಿ
ವಿಹ್ವಲತೆಯ ಕೂಗನ್ನೆಬ್ಬಿಸಿ ಕನಲುತ್ತದೆ
ಮಳೆಗಾಲದಲ್ಲೂ ಮಾಲೀಕನ
ಮರ್ಜಿಗಾಗಿ ಕಾಯುವ
ಕಿಟಕಿಯ ಹಿಂದಿನ ಗುಲಾಬಿ ಗಿಡದಂತೆ!

Thursday, January 24, 2013

ತಿರುವುಗಳು

ನಿನ್ನ ನೆನಪಿನ ಹಾಯಿ ದೋಣಿಯ ಮೇಲೆ
ನಾಲ್ಕು ತೇವದ ಇಂಕಿನ ಗೆರೆಗಳನ್ನು ಗೀಚ ಹೋದಾಗ
ಥಟ್ಟನೆ ಎಗರಿದ ಅನಿರೀಕ್ಷಿತ ಕಾಲನ ತಿರುವು
ಎಲ್ಲವನ್ನೂ ಅಳಿಸಿ ಹಾಕಿತು