Tuesday, March 22, 2022

ಒಲವು ಮತ್ತು ಕಾಲ

ತಟಕ್ಕನೆ ಬಿದ್ದ ಸಣ್ಣ ಮಳೆಹನಿಯೊಂದು ಹಸಿರೆಲೆಯ ನಡುವೆ ಗೆರೆಯಾಗಿ ಹರಿದು

ಬೆಟ್ಟದ ಹಣೆಯ ಮೇಲೆ ಒತ್ತಿನಿಂತ ಮರಗಳ
ನಡುವೆ ಹಸಿ ಮೋಡಗಳು ಜಾರಿ ಮರದ ರೆಂಬೆಯನ್ನು ಅಪ್ಪಿದರೂ ತಳಕೊಂಬೆಗೆ
ಹುದುವಿನೊಳಗೆ ಸೀತಾಳೆಬಳ್ಳಿಯ ಬೇರಿನ ಮುತ್ತು
ಮುಟ್ಟಲಾಗದ ಬೈಗುಗೆಂಪಿನಲ್ಲಿ ಅಡಗಿರುವ
ಬಣ್ಣಗಳ ಓಕುಳಿ ಚೆಲ್ಲಿದ ಎದೆ ಗೂಡು
ಮರಳ ಕಣಕ್ಕೆ ದಿನವೂ ಮುತ್ತಿಟ್ಟು
ಮುತ್ತಾಗಿಸುವ ಚಿಪ್ಪಿನೊಳಗಿನ ಜೀವದ ಕನಸು
ಬೆಳಕಿನ ನಿರೀಕ್ಷೆಯಿಂದ ನೆಲದಡಿಯ
ಕತ್ತಲಿನಲ್ಲಿ ಮೊಳೆಯುವ ಬೀಜದ ಕಾತರ
ಎಂದೋ ಹುಟ್ಟುವ ಮಗುವಿಗಾಗಿ
ಹಂಬಲಿಸುವ ತಾಯ ಮೊಲೆಗಳು
ಕಾಲವನ್ನು ಮೆಟ್ಟಿ ನಿಲ್ಲಲು ಒಲವಿಗಲ್ಲದೇ
ಮತ್ಯಾರಿಗೆ ಸಾಧ್ಯ?
- ಪ್ರಸನ್ನ ರೇವನ್


Friday, April 23, 2021

ಎದೆ ಮೋಡಗಳ ಗುಡುಗು

ಎದೆ ಮೋಡಗಳ ಗುಡುಗು 

ಭುವಿಯೆದೆಯಲಿ ಇನ ಜಾರಿದ 

ದಿಕ್ಕಂಚಿನಲಿ ಚದುರಾಡಿದೆ ಮಿಂಚು,

ಉತ್ಕಟತೆಯ ಬಿಸು ಬಿರುಗಾಳಿಗೆ 

ನುಸುಳಾಡುವ ತೋಳುಗಳ ಸಂಚು!

ಮೆತ್ತನೆಯ ಹಿಮದೊದಿಕೆಯಲಿ 

ಹರಿದಾಡಿದೆ ತಿದಿಯುಸಿರಿನ ಮೊರೆತ, 

ಧರಧುರದ ಬರಸಿಡಿಲಿನ ಉರಿಜ್ವಾಲೆಯಲಿ

ನುಸುಳಾಡುವ ಫಣಿಮಂಡಲದ ಹೊಸೆತ!

ಸುಳಿದಾಡುವ ಮುಂಗುರುಳಿನ ಹಂದರದಿ 

ಬೆಸೆದೆದೆಗಳ ಬಿಸಿಯುಸಿರಿನ ಕಾದಾಟ

ಹಸಿದೊಲವಿನ ಉನ್ಮಾದಕೆ 

ಆಲಿಂಗನದ ಮಾಟ! 

ಎದೆಯೊಳಗಿನ ಉರಿಬಿಸಿಲಿಗೆ 

ಬಿಸಿ ಬೆಸುಗೆಯೇ ತಂಪು 

ಸುರಿಸುರಿಯುವ ಹಿಮದೊಳಗೆ

ಬೆವರಿನ ಹೊಳೆ ಕಂಪು!

- ಪ್ರಸನ್ನ 

Tuesday, May 12, 2020

ಅಮ್ಮ


ಅಮ್ಮ...

ಸಂಭವಿಸಿದೆ ಕಡುಹಳದಿಯ 
ಆಗಸದಲಿ ರವಿಯುದಿಸಿದದಂತೆ
ಆ ಕೊನೆಮುಟ್ಟದ ಆಗಸ 
ನೀನಲ್ಲವೇನು? 

ತಿರುತಿರುಗಿ ನಿಂತೆ ನೀಲಿಕಡಲ
ದೂರ ತೀರವ ತಲುಪಿದ ಚಿಪ್ಪಿನಂತೆ
ಪಾರಾವಾರವ ಬಳಸಿದ ದಡ 
ನೀನಲ್ಲವೇನು? 

ಜಯಿಸಿ ಬಂದೆ ಕರಿ ಮತಂಗದೆತ್ತರದ
ಪುಸ್ತಕವನುಂಡ ಸಾರಸ್ವತನಂತೆ 
ಎಡವಿದೊಡೆ ಮಸ್ತಕದಿ ಹೊಳೆವ ಪದ 
ನೀನಲ್ಲವೇನು? 

ಅಪ್ಪನೆನೆಸಿಕೊಂಡೆ ಕೆಂಗೆನ್ನೆಯ
ಮುಗುದೆಯರ ಸವಿಮಾತಿನಂತೆ 
ಆ ಎಳೆಪಾದಗಳು ನನ್ನೆದೆಯಲಿ ಮೂಡಿಸಿದ ಅಚ್ಚು 
ನೀನಲ್ಲವೇನು? 

ಯಾರೂ ಹೇಳಿಕೊಡದ ಮೊದಲ ಪದ
ಕೊನೆಯುಸಿರವರೆಗೂ ಮರೆಯದ ಪದ್ಯ 
ನೀನಲ್ಲವೇನು? 

- ಪ್ರಸನ್ನ 

Tuesday, February 04, 2020

ಎದುರಿಗೆ ಕಂಡವಳ ಕವಿತೆ

ಎದುರಿಗೆ ಕಂಡವಳ ಕವಿತೆ

ಪೇಲವ ಮೋಡಗಳ ಅಂಚಿಂದ ಜಾರಿದ
ಬೆಚ್ಚನೆ ನೆಲದ ಮಡಿಲನ್ನು ಕನಸಿದ
ಆ ಹಿಮದ ಹನಿ ಕೊನೆಗೂ ಮುತ್ತಿಟ್ಟಿತು
ಅವಳ ಕಂಗಳ ತುದಿಯ ಕಾಡಿಗೆ ತಟ್ಟನೆ ತೊಟ್ಟಿಕ್ಕಿತು

ರೆಪ್ಪೆಗಳ ನಿಧಾನದ ಅಪ್ಪುಗೆಯಲ್ಲಿ
ಹಿಂಡುವುದು ಯಾತನೆ ಕಣ್ಣಲ್ಲಿ
ಇಳಿಯುತ್ತಿದ್ದ ಸೂರ್ಯ ದಿಗಂತದೊಳಗೆ
ಜಾರುತ್ತಿತ್ತು ಕೆಂಡದ ಕಡ್ಡಿ ಬೆರಳೆಡೆಗೆ

ಕಾರಣವಿಲ್ಲದೆ ಏರುವ ಎದೆಬಡಿತ
ಕಾಣದ ಹಾದಿಗಳ ಹುಡುಕುವ ತುಡಿತ
ಪ್ರೇಮ ಮರೆತ ಮುಖದಲ್ಲಿ
ಭಾವನೆಗಳ ಹೊಯ್ದಾಟ? 


ಮೂಡದ ಚಿತ್ರವ ಅಡಗಿಸಿಕೊಂಡು
ಗಹಗಹಿಸಿ ಕೆರಳಿಸುವ ಹಾಳೆ,
ಕಾಲದ ಕಣ್ಣ ತಪ್ಪಿಸಿದ ಪ್ರೀತಿಯ ಆಳ,
ತೀರದ ಬಯಕೆಗಳ ಚಾದರದ ಕಪ್ಪಿನಲಿ
ಕನಸಿನ ಬಣ್ಣಗಳ ಬೆಳಕಿನಾಟ
ಇದು ಎದುರಿಗೆ ಕಂಡವಳ ಕವಿತೆ
ಅವಳು ಮತ್ತೆ ಕಾಣದಿರಲಿ

ಪ್ರಸನ್ನ

Friday, May 24, 2019

ಒಂದು ಮಧ್ಯಾಹ್ನ





ಎದೆಯ ಹಾಸಿಗೆಗೆ ಒರಗಿ
ಉಸಿರಿನ ಏರಿಳಿತಗಳಲ್ಲಿ ತಾನಾಗಿ
ಗುಂಡಿಗೆಯ ನಾದದಲ್ಲಿ ಒಂದಾಗಿ
ಅಪ್ಪಿ ಜಾರಿದಳು ಸ್ವಪ್ನಲೋಕದಲಿ

ಕನಲುವಳು ಕನಸಿನ ಮೆಲುಕಿಗೆ,
ಮತ್ತೆ ಮತ್ತೆ ಬಿಗಿಯುವ ಅಪ್ಪುಗೆಗೆ,
ಏನು ಹೇಳಲಿ ಕಡುಗಪ್ಪಿನ
ನಿದ್ದೆಯಲ್ಲೂ ಮಿಂಚುವ ನಗುವಿಗೆ?

ಕಪ್ಪು ಕೂದಲ ಇರುಳಿನಲಿ
ಮಿನುಗುವಳು ತನ್ನಾಕಾಶದಲಿ
ಹೊಳೆವ ರೆಪ್ಪೆಗಳಾಡಿಸುತ
ನಿಟ್ಟನೆ ಸುಯ್ಯುವಳು ಬಿಸಿಯುಸಿರ ತಾಳದಲಿ

ದೂರವಿರುವ ನನ್ನಮ್ಮನ ಒಲುಮೆಯ
ಮಡಿಲಿನಲ್ಲಿ ಒರಗಿಹುದು ನನ್ನ ಮನ
ಅವಳ ಉಸಿರಿಗೆ ತಾಳವಾಗಿ ನನ್ನುಸಿರು,
ದೇಶಕಾಲಗಳ ದಾಟಿ ಮಿಡಿಯುವ ಕರುಳಬಳ್ಳಿ

ನನ್ನ ಮಡಿಲಿಗೆ ಒರಗಿರುವ ಇವಳೂ ನನ್ನಮ್ಮನಲ್ಲವೇ?
ತಾಯಲ್ಲದ ಹೆಣ್ಣಿಲ್ಲದಂತೆ ಹೆಣ್ಣೆಲ್ಲವೂ ಹೊನ್ನಲ್ಲವೇ?

-ಪ್ರಸನ್ನ



Monday, January 14, 2019

ನನಗೇನು ಬೇಕು?


ನನಗೇನು ಬೇಕು?

ನನಗೆ ಬೇಕು, ಬಿರು ಬೇಸಗೆ ಸಂಜೆಗಳ ತಂಪುಗಾಳಿ
ಅಟ್ಟದ ಮೇಲಿಟ್ಟ ಬಾಳೆಗೊನೆಗಳ, ಬೆಲ್ಲದ ಅಚ್ಚುಗಳ ಕಮಟು ನಾತ
ಕಾಡು ಹಾದಿಯ ಚಿಕ್ಕ ಜಲಪಾತದ ಸಣ್ಣ ಮೊರೆತ
ಕಣ್ಣ ಮುಂದೆ ಗಕ್ಕನೆ ಸುಳಿವ ಕೆಂಪು ಏರೋಪ್ಲೇನ್ ಚಿಟ್ಟೆ

ಮಳೆನಿಂತರೂ ನಿಲ್ಲದ ಹಂಚಿನ ತುದಿಯ ಹನಿಗಳು
ಮುಗಿಲೆತ್ತರಕೆ ಹಬ್ಬಿದ ಮರದಡಿಯ ಪುಟ್ಟ ಆಡಿನಮರಿಯ ಕೇಕೆ
ಚಳಿಗಾಲದ ಕತ್ತಲಿನ ಸಂಜೆಗಳ ಬೆಚ್ಚಗಿನ ಗಂಜಿ, ಹುರಿದ ಮೀನು
ಬಾವಿಯೊಳಗಿನ ಮರಿ ಆಮೆಯ ದಿಟ್ಟ ನೋಟ

ಉಜ್ವಲ ವರ್ಣಗಳ ಹಕ್ಕಿಗಳ ಸುಳಿದಾಟ, ಮರೆದಲೆಗಳ ಹೊಯ್ದಾಟ
ವ್ಯೋಮದಾಚೆಯ ನಕ್ಷತ್ರ ಪುಂಜಗಳ ದಿಟ್ಟಿಸುವ ಸರಿರಾತ್ರಿಯ ಮೌನ
ಪ್ರೀತಿಸುವವರ ಸಾನಿಧ್ಯ, ಕಣ್ಣುಮುಚ್ಚಿ ಅತ್ತುಬಿಡುವ ಗೆಳೆತನ
ಭೂಮಿಯನ್ನು ಸೀಳಿ ಎದ್ದುನಿಲ್ಲುವ ಚಿಗುರಿನ ಪಾಠ

ನನಗೆ ಯಾವಾಗಲೂ ಬೇಕು ಈ ಪುಟ್ಟ ಬೇಕುಗಳನ್ನು
ಕನಸಿಸುವ ಮುಗ್ಧತೆ, ಸ್ವಲ್ಪ ದಡ್ಡತನ ಮತ್ತು ಬಹಳ ಹಸಿವು

-ಪ್ರಸನ್ನ ರೇವನ್



Wednesday, September 05, 2018

ಶ್ಲೋಕತ್ವ ಮಾಗತಃ

ನಟ್ಟಿರುಳಿನ ಕಗ್ಗತ್ತಲ
ನೀರವ ಮೌನದ ಗೆಳೆತನ,
ನನ್ನತನದ ನೋವು ನನ್ನೊಳಗೆ
ಮಿಣುಕುವ ಪುಟ್ಟ ದೀಪ

ನೆರಳ ಕೈ ಹಿಡಿದು ನೆಡೆದು
ಎಡವಿ ನೆರಳಾಗಿ ಬಿಡುವ ಹಂಬಲ,
ಮಳೆನಿಂತು ಹೊತ್ತಾದರೂ
ತೊಟ್ಟಿಕ್ಕುವ ಹೆಂಚಿನ ತುದಿ

ನಾನೇನೇ ಆದರೂ ನಾನಾಗದ
ಅದೆಷ್ಟು ಅನುಭವಗಳು?
ಸುತ್ತಲಿನ ಪ್ರಪಂಚದ ತುಂಬ
ಮುಗಿಯದ ಹಾಡುಗಳೆಷ್ಟು?

ಬದಲಾಗುವ ಬೆಳಕಿನ
ಜಗತ್ತಿನಲ್ಲಿ ಬದಲಾಗುತ್ತಲೇ
ಬೆತ್ತಲಾಗುವ ಮೈಮನಗಳ,
ಒಳಸುಳಿಗಳ ಅಮಾಯಕತೆ
ನನ್ನ ನಿಜವಾದ ಆಸ್ತಿ, ಅಥವಾ ಅಸ್ತಿ...

-ಪ್ರಸನ್ನ

Tuesday, June 26, 2018

ಮುಗುದೆ

ಚಾಚಿದ ಹವಳದ ಬೆರಳುಗಳು
ಗಾಳಿಗೆ ಒದೆಯುವ ಎಳೆ ಸಂಪಿಗೆಯ ಪಾದ
ಹೊಳೆಯುವ ಕಪ್ಪು ರಾತ್ರಿಯಂಥ ಕಣ್ಣುಗಳಿಂದ
ಇಣುಕಿದ್ದು ಬೆಳದಿಂಗಳಿನ ಆಪ್ತತೆ

ದಿಗಂತದ ಬೊಟ್ಟಿನಂತ ದಿಟ್ಟ ನೋಟ
ಮಲ್ಲಿಗೆಯ ದಂಡೆಯಂಥಾ
ಹಾತೊರೆಯುವ ಬಾಹುಗಳು
ಜೇನಿನ ಕೆನ್ನೆಗಳಿಂದ ಜಾರಿ ಬಂದ
ಪುಟ್ಟ ಕೇಕೆ ಕಿವಿಗೆ ಸಿಹಿ ಸುರಿದಂತೆ

ತಾವರೆ ಎಸಳಿನಂಥ ತುಟಿಗಳಿಂದ
ಚಾಚಿದ ಮುಗ್ಧ ನಗುವ ಕಂಡ ಕಣ್ಣು
ಕಾಣುವ ಕನಸೆಲ್ಲವೂ ಗುಲಾಬಿಯೇ!
ಆ ನನಸಾದ ಕನಸಿನ ಹೆಸರೇ ಸನ್ಮಯ!

-ಪ್ರಸನ್ನ

ಯಾಕೆ?

ಹೊರಗೆ ಭರ್ರನೆ ಸುರಿಯುತ್ತಿರುವ ಮಳೆ,
ಒಳಗೆ ಸಿಡಿಯುವ ಗುಡುಗು ಮಿಂಚು
ನಿನ್ನ ಮೆದು ತುಟಿ ಮತ್ತು ಪಾದಗಳ ಅಚ್ಚು,
ನನ್ನ ಎದೆಯ ಮೇಲೆ ಇನ್ನೂ ಹಾಗೆಯೇ ಇವೆ.


ದೇಶ ಕಾಲಗಳು ನುಗ್ಗುವ ರೈಲಿನಂತೆ ಸರಿದರೂ
ನಿರಂತರವಾಗಿ ಜೀಕುವ ಜೋಕಾಲಿಯಂತೆ
ಕನಸು, ನೋವು, ದುಗುಡ, ಮೌನದೊಳಗಿಂದ
ಆಗಾಗ ಇಣುಕುವ ನಿನ್ನಿಂದ ದೂರ ಹೇಗೆ ಸಾಧ್ಯ?

ಸುಟ್ಟ ಹೃದಯ ಬೆಂಕಿಯನ್ನು ಪ್ರೀತಿಸುವಂತೆ
ಕಣ್ಣೀರಿನಲ್ಲೂ, ಕಾಡಿನಲ್ಲೂ, ಕತ್ತಲಲ್ಲೂ, ಕಡೆಗೆ
ಕನಸಿನಲ್ಲೂ ನನ್ನನ್ನು ಒಂಟಿಯಾಗಿ ಬಿಡದ ನೀನು
ನನ್ನನ್ನು ಅಗಲಿದ್ದಾದರೂ ಯಾಕೆ?

-ಪ್ರಸನ್ನ

Thursday, May 24, 2018

ಬೇಸಗೆಯ ರಾತ್ರಿಗಳು


ಬೇಸಗೆಯ ರಾತ್ರಿಗಳು
ಬೇಸರದ ಕನಸುಗಳು
ಬೀಸದ ಗಾಳಿಗೆ ಅಲುಗದ ಎಲೆಗಳು
ಮುಚ್ಚಿಟ್ಟ ಮಾತುಗಳ
ಬಚ್ಚಿಟ್ಟ ಆಸೆಗಳ
ಬಿಚ್ಚಿ ನೋಡದ ಮನಸಿನೊಳಗಿನ
ಬೆಚ್ಚನೆಯ ಹರೆಯವ 
ಕುಚ್ಚುವ ಬೆಳದಿಂಗಳ
ದಿಟ್ಟಿಸುವ ಕಣ್ಣುಗಳೊಳಗೆ
ಭುಗಿಲೆದ್ದು ಉರಿಯುವ
ಬುಸುಗುಡುವ ರಾತ್ರಿಗಳು

-ಪ್ರಸನ್ನ ರೇವನ್