ಯಾರ ಹಂಗೂ ಇರದ
ಯಾರ ಸಿದ್ಧ ಸೂತ್ರಕ್ಕೂ ಬಗ್ಗದ ಯಾವ ಜಾತಿಧರ್ಮದ ಸೋಂಕೂ ಬರದ ರಾಗ, ದ್ವೇಷ, ವಿಷಾದ ರಹಿತ ಸ್ವಚ್ಚ ಆಕಾಶದ ಸಿಸುಗೂಸು ನಾನು, ನೀಲ ವಿಸ್ತರದ ಪಾರಾವಾರದ ದಿನಮಣಿಯೂ… ಮರಳ ಕಣವೂ ನಾನು…
ಯಾರ ಹಂಗೂ ಇರದ
ಯಾರ ಸಿದ್ಧ ಸೂತ್ರಕ್ಕೂ ಬಗ್ಗದ ಯಾವ ಜಾತಿಧರ್ಮದ ಸೋಂಕೂ ಬರದ ರಾಗ, ದ್ವೇಷ, ವಿಷಾದ ರಹಿತ ಸ್ವಚ್ಚ ಆಕಾಶದ ಸಿಸುಗೂಸು ನಾನು, ನೀಲ ವಿಸ್ತರದ ಪಾರಾವಾರದ ದಿನಮಣಿಯೂ… ಮರಳ ಕಣವೂ ನಾನು…
ಅಮೆರಿಕೆ
ತುತ್ತಿಕ್ಕಿ ಉಣಿಸುತ್ತಲೇ ಕಹಿರೊಟ್ಟಿಯ
ಗಂಟಲಿಗೆ ನೆಟ್ಟಳು ತನ್ನ ಹುಲಿ ದವಡೆಯ
ಹೀರುತ್ತಲೇ ನನ್ನ ಜೀವದ ಉಸಿರ, ಆದರೂ ಕೇಳಿ
ಪ್ರೇಮಿಸುವೆ ನನ್ನ ಹರೆಯ ಪರೀಕ್ಷಿಸಿದ ಈ ಸುಂದರ ನರಕವ
ನನ್ನ ಬಿಸಿರಕ್ತಕೆ ಹರಿವಾಗಿ ನುಗ್ಗಿದೆ ಅವಳದೇ ಕಸುವು
ಅವಳ ಮೇಲಿನ ನನ್ನ ಹಗೆತನಕ್ಕೆ ಅದೇ ಬಲವು
ಮತ್ತೆ ಮತ್ತೆ ಸೊಕ್ಕಿದ ಹೊಳೆಯಂತೆ ನುಂಗುವಳು ನನ್ನತನವ
ಆದರೂ, ರಾಜನ ಕಾಲಡಿ ನಿಂತ ಕ್ರಾಂತಿಕಾರಿಯ ರೀತಿ
ನಿಲ್ಲುವೆ ಅವಳ ಗೋಡೆಗಳ ನಡುವೆ ಕೊಂಚವೂ ಇಲ್ಲದೆ ಭೀತಿ,
ಅಂಜಿಕೆ, ದುಃಖ, ಪಿಸುಮಾತಿನ ಅಳುಕು
ಎದುರಿನ ದಿನಗಳ ನೋಟದಲಿ ಇಲ್ಲವೇ ಇಲ್ಲ ಬೆಳಕು
ಕಂಡಷ್ಟೂ ಅವಳದೇ ಬಲ, ಮಹಾ ಪರ್ವತದ ಬೆರಗು
ಅವಿತಿದೆ ಎಲ್ಲವೂ ಕಾಲನ ಗುರಿತಪ್ಪದ ಕೈ ಬೀಸಿನ ಕೆಳಗೆ
ಮುಳುಗುವಂತೆ ಸಿರಿಹೊನ್ನು ಉಸುಕಿನ ಒಳಗೆ.
ಕ್ಲಾಡ್ ಮೆಕೆ
ಕನ್ನಡಕ್ಕೆ: ಪ್ರಸನ್ನ
ತಟಕ್ಕನೆ ಬಿದ್ದ ಸಣ್ಣ ಮಳೆಹನಿಯೊಂದು ಹಸಿರೆಲೆಯ ನಡುವೆ ಗೆರೆಯಾಗಿ ಹರಿದು
ಎದೆ ಮೋಡಗಳ ಗುಡುಗು
ಭುವಿಯೆದೆಯಲಿ ಇನ ಜಾರಿದ
ದಿಕ್ಕಂಚಿನಲಿ ಚದುರಾಡಿದೆ ಮಿಂಚು,
ಉತ್ಕಟತೆಯ ಬಿಸು ಬಿರುಗಾಳಿಗೆ
ನುಸುಳಾಡುವ ತೋಳುಗಳ ಸಂಚು!
ಮೆತ್ತನೆಯ ಹಿಮದೊದಿಕೆಯಲಿ
ಹರಿದಾಡಿದೆ ತಿದಿಯುಸಿರಿನ ಮೊರೆತ,
ಧರಧುರದ ಬರಸಿಡಿಲಿನ ಉರಿಜ್ವಾಲೆಯಲಿ
ನುಸುಳಾಡುವ ಫಣಿಮಂಡಲದ ಹೊಸೆತ!
ಸುಳಿದಾಡುವ ಮುಂಗುರುಳಿನ ಹಂದರದಿ
ಬೆಸೆದೆದೆಗಳ ಬಿಸಿಯುಸಿರಿನ ಕಾದಾಟ
ಹಸಿದೊಲವಿನ ಉನ್ಮಾದಕೆ
ಆಲಿಂಗನದ ಮಾಟ!
ಎದೆಯೊಳಗಿನ ಉರಿಬಿಸಿಲಿಗೆ
ಬಿಸಿ ಬೆಸುಗೆಯೇ ತಂಪು
ಸುರಿಸುರಿಯುವ ಹಿಮದೊಳಗೆ
ಬೆವರಿನ ಹೊಳೆ ಕಂಪು!
- ಪ್ರಸನ್ನ