Monday, July 10, 2006

ಬಯಲು ಸೀಮೆಯಲ್ಲಿನ...

ಬಯಲು ಸೀಮೆಯಲ್ಲಿನ
ನೆಲದ ಬಿರುಕುಗಳು ಅಲ್ಲಿಯ
ಗಂಡಸರ ಬಾಹುಗಳಂತೆ
ಬಲು ಕಠಿಣ ಮತ್ತು ಕಲಾತ್ಮಕ

ಆ ಬಿರುಕುಗಳನ್ನು ಸೀಳಿ
ಚಿಕ್ಕ ಇಬ್ಬನಿಯ ತೇವ
ಗರಿಕೆ ಹುಲ್ಲನ್ನು ಹುಟ್ಟಿಸುತ್ತದೆ
ಎರೆ ಬಣ್ಣದ ಬಾಹುಗಳು
ಮೈಲುಗಟ್ಟಲೆ ಭೂಮಿ
ಅಗೆಯುವಂತೆ

ಬಯಲಿನ ಗಾಳಿಯಲ್ಲಿ
ಅಪರೂಪದ ಸುಗಂಧಗಳು
ನೆನಪಿಸುತ್ತವೆ ಅಲ್ಲಿನ ಹೆಣ್ಣುಗಳ
ಮುಗ್ಧ ಸೌಂದರ್ಯವನ್ನು

ಬಯಲಿನ ಆಗಸದಲ್ಲಿ ಅಲೆಯುವ
ಹಕ್ಕಿಯೊಂದು ತನ್ನ ಜೋಡಿಯನ್ನು
ಬೆನ್ನಟ್ಟಿದೆ, ಆ ಆಗಸದ ಕೆಳಗೆ
ಬಂಡಿಯ ತಳದ ನೆರಳಿನಲ್ಲಿ
ಪಿಸುಮಾತಾಡುವ ಪ್ರೇಮಿಗಳಂತೆ

ದೂರದಲ್ಲೊಂದು ಕೃಷ್ಣ ಮೃಗಗಳ
ಹಿಂಡು ಅಲೆಯುತ್ತಿವೆ ನೀರ ಹುಡುಕಿ
ಬೆದರುತ್ತವೆ ಚಿಮ್ಮುತ್ತವೆ
ಮರೀಚಿಕೆಯಲ್ಲಿ ತಮ್ಮ ಪ್ರತಿಫಲನವ
ತಾವೆ ಕಂಡು

ಶ್ರಾವಣದ ಸಂಜೆಗಳಲ್ಲಿ ಬಯಲು
ಸೀಮೆಯ ತುಂಬಿದೆ ಶಿವನ ಹೆಸರು
ರೊಟ್ಟಿ ಬಡಿಯುವ ಸದ್ದಿಗೆ ತಾಳವಾಗಿ
ಶಿಲ್ಪಿಯ ಕೆತ್ತನೆಗೆ ಪದವಾಗಿ
ನ್ಯಾಯದ ಮಾತುಗಳಿಗೆ ಸಾಕ್ಷಿಯಾಗಿ
ಚಿಕ್ಕ ಕಂದನ ತೊದಲಿಗೆ ದನಿಯಾಗಿ

- ಪ್ರಸನ್ನ ರೇವಣ್ಣ

No comments: